ಮಣಿಪಾಲ: ಮಣಿಪಾಲದ ಅಟಲ್ ಬಿಹಾರಿ ವಾಜಪೇಯಿ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘದ ಉಡುಪಿ ಜಿಲ್ಲಾ ಶಾಖೆಗಳ ಸಂಯುಕ್ತ ಆಶ್ರಯದಲ್ಲಿ ರಾಜ್ಯ ಸರಕಾರಿ ನೌಕರರ ದಿನಾಚರಣೆ ಹಾಗೂ ೨೦೨೧ ಮತ್ತು ೨೨ನೇ ಸಾಲಿನ ಜಿಲ್ಲಾ ಮಟ್ಟದ ಸರ್ವೋತ್ತಮ ಸೇವಾ ಪ್ರಶಸ್ತಿ ವಿತರಣಾ ಕಾರ್ಯಕ್ರಮ ನಡೆಯಿತು.ಕಾರ್ಯಕ್ರಮವನ್ನು ಉಡುಪಿ ನಗರಸಭಾ ಅಧ್ಯಕ್ಷೆ ಸುಮಿತ್ರಾ ನಾಯಕ್ ಉದ್ಘಾಟಿಸಿದರು.
ಬಳಿಕ ಮಾತನಾಡಿದ ಅವರು ಸರಕಾರಿ ನೌಕರರು ಸರಕಾರದ ಎಲ್ಲಾ ಸೇವೆಗಳನ್ನು ಸಮಾಜದ ಕಟ್ಟಕಡೆಯ ವ್ಯಕ್ತಿಗೂ ತಲುಪಿಸುವಂತೆ ಪ್ರಾಮಾಣಿಕತೆಯಿಂದ ಕರ್ತವ್ಯ ನಿರ್ವಹಿಸಬೇಕು ಎಂದು ಅವರು ಸಮಸ್ತ ಸರಕಾರಿ ನೌಕರರಿಗೆ ಕಿವಿಮಾತು ಹೇಳಿದರು.
ಸರಕಾರಿ ಸೇವೆಗಳನ್ನು ಅರಸಿ ಬರುವ ಜನತೆಗೆ ಸಕಾಲದಲ್ಲಿ ಸೇವೆಗಳನ್ನು ಒದಗಿಸಿ. ಒಂದು ವೇಳೆ ನಿಮ್ಮಲ್ಲಿ ಆ ಸೇವೆ ಲಭ್ಯವಿಲ್ಲದಿದ್ದರೆ ಅವರಿಗೆ ಸೂಕ್ತ ಮಾಹಿತಿ ನೀಡಿ. ಅನಾವಶ್ಯಕವಾಗಿ ಅವರನ್ನು ಕಚೇರಿಗೆ ಅಲೆದಾಡಿಸಬೇಡಿ ಎಂದ ಸುಮಿತ್ರಾ ನಾಯಕ್, ಉಡುಪಿ ಜಿಲ್ಲೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪ್ರಾಮಾಣಿಕ ಸರಕಾರಿ ನೌಕರರು ಇದ್ದು, ಜಿಲ್ಲೆಯ ಅಭಿವೃದ್ಧಿಗೆ ಶ್ರಮಿಸುತ್ತಿದ್ದಾರೆ. ನೌಕರರು ಮಾನಸಿಕ ಒತ್ತಡಗಳಿಗೆ ಒಳಗಾಗದೇ ಕಾರ್ಯನಿರ್ವಹಿಸಬೇಕು ಎಂದರು.
Kshetra Samachara
21/04/2022 09:11 pm