ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಸ್ನೇಹಿತರೊಂದಿಗೆ ಹೊಳೆಯಲ್ಲಿ ಈಜಲು ತೆರಳಿದ್ದ ಯುವಕ ನೀರಿನಲ್ಲಿ ಮುಳುಗಿ ಸಾವು

ಹೆಬ್ರಿ: ಸ್ನೇಹಿತರೊಂದಿಗೆ ಸೇರಿಕೊಂಡು ಹೊಳೆಯಲ್ಲಿ ಈಜಲು ತೆರಳಿದ್ದ ಯುವಕನೋರ್ವ ನೀರಿನಲ್ಲಿ ಮುಳುಗಿ ದಾರುಣವಾಗಿ ಮೃತಪಟ್ಟ ಘಟನೆ ಹೆಬ್ರಿ ತಾಲೂಕಿನ ವರಂಗ ಗ್ರಾಮದ ತಲಮನೆ ಎಂಬಲ್ಲಿ ಬುಧವಾರ ಸಂಜೆ ನಡೆದಿದೆ.

ಮುನಿಯಾಲು ಗಾಂಧಿಮೈದಾನ ಬಳಿಯ ನಿವಾಸಿ ವಾದಿರಾಜ ಆಚಾರ್ಯ ಎಂಬವರ ಮಗ ಪವನ್ ಆಚಾರ್ಯ(27) ಎಂದು ತಿಳಿದುಬಂದಿದೆ. ಪವನ್ ಮುದ್ರಾಡಿಯಲ್ಲಿ ಸ್ವಂತ ಅಂಗಡಿಯಲ್ಲಿ ಚಿನ್ನ ಹಾಗೂ ಬೆಳ್ಳಿ ಆಭರಣಗಳ ಕುಸುರಿ ಕೆಲಸ ಮಾಡಿಕೊಂಡಿದ್ದು, ಬುಧವಾರ ಮಧ್ಯಾಹ್ನ ತನ್ನ ಸ್ನೇಹಿತರೊಂದಿಗೆ ಪಾರ್ಟಿ ಮುಗಿಸಿದ ಬಳಿಕ ವರಂಗ ಮಾತಿಬೆಟ್ಟು ಸಮೀಪದ ತಲಮನೆ ಎಂಬಲ್ಲಿ ಹೊಳೆಯಲ್ಲಿ ಈಜಲು ತೆರಳಿದ್ದರು ಎನ್ನಲಾಗಿದೆ.

ಹೊಳೆಯಲ್ಲಿ ಸ್ನೇಹಿತರೊಂದಿಗೆ ಸ್ನಾನ ಮಾಡುತ್ತಿದ್ದ ಸಂದರ್ಭದಲ್ಲಿ ಏಕಾಎಕಿ ನಾಪತ್ತೆಯಾದ ಪವನ್‌ಗಾಗಿ ಸ್ನೇಹಿತರು ಹುಡುಕಾಡಿದಾಗ ಅವರ ಶವವು ಅನತಿದೂರದಲ್ಲಿ ನೀರಿನಲ್ಲಿ ಮುಳುಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಆದರೆ ಸ್ನಾನಕ್ಕೆ ತೆರಳಿದ್ದ ಸ್ಥಳದಲ್ಲಿ ಮೊಣಕಾಲು ಮುಳುಗುವಷ್ಟು ನೀರು ಇತ್ತೆಂದು ಸ್ಥಳೀಯ ಪ್ರತ್ಯಕ್ಷದರ್ಶಿಗಳು ತಿಳಿಸಿದ್ದು ಅಷ್ಟು ಸ್ವಲ್ಪ ನೀರಿನಲ್ಲಿ ಪವನ್ ಹೇಗೆ ನೀರಿನಲ್ಲಿ ಮುಳುಗಿ ಪ್ರಾಣಬಿಟ್ಟರು ಎನ್ನುವುದೇ ಹಲವು ಸಂಶಯಗಳಿಗೆ ಎಡೆಮಾಡಿದೆ.

ಘಟನಾ ಸ್ಥಳಕ್ಕೆ ಹೆಬ್ರಿ ಪೊಲೀಸರು ಭೇಟಿ ನೀಡಿ ಈ ಕುರಿತು ಮಾಹಿತಿ ಕಲೆ ಹಾಕುತ್ತಿದ್ದಾರೆ.ಪವನ್ ಜತೆ ಹೋಗಿದ್ದ ಯುವಕರನ್ನು ವಿಚಾರಣೆಗೊಳಪಡಿಸಿದರೆ ಅಸಲಿ ನಿಜಾಂಶ ಹೊರಬರಬಹುದಾಗಿದೆ. ಈ ಕುರಿತು ಹೆಬ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Edited By : PublicNext Desk
Kshetra Samachara

Kshetra Samachara

14/09/2022 08:23 pm

Cinque Terre

3.02 K

Cinque Terre

0

ಸಂಬಂಧಿತ ಸುದ್ದಿ