ಕಾರ್ಕಳ: ಪಡಿತರ ಅಕ್ಕಿಯನ್ನು ಮನೆಮನೆಗೆ ತೆರಳಿ ಹಣ ನೀಡಿ ಸಂಗ್ರಹಿಸಿ ಅದನ್ನು ಮಾರಲು ಯತ್ನಿಸುತ್ತಿದ್ದವನನ್ನು ಪೊಲೀಸರು ಬಂಧಿಸಿದ್ದು, 20 ಕ್ವಿಂಟಾಲ್ ಅಕ್ಕಿ ಮತ್ತು ಸಾಗಾಟಕ್ಕೆ ಬಳಸಿದ ವಾಹನವನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.ಅಬ್ದುಲ್ ರಹಿಮಾನ್ ಬಂಧಿತ ಆರೋಪಿ.
ನೀರೆ ಗ್ರಾ.ಪಂ.ನ ಕಣಜಾರು ಶೆಮೆಗುರಿಯಲ್ಲಿ ವ್ಯಕ್ತಿಯೋರ್ವ ಅಕ್ರಮವಾಗಿ ಪಡಿತರ ಅಕ್ಕಿಯನ್ನು ಸಂಗ್ರಹಿಸಿ ವಾಹನದಲ್ಲಿ ಸಾಗಿಸುತ್ತಿರುವುದು ಪಂಚಾಯತ್ ಸದಸ್ಯ ಸಚ್ಚಿದಾನಂದ ಪ್ರಭು ಅವರ ಗಮನಕ್ಕೆ ಬಂದಿದ್ದು, ತತ್ಕ್ಷಣ ಪಿಡಿಒ ಅಂಕಿತಾ ಅವರ ಗಮನಕ್ಕೆ ತಂದರು. ಪಿಡಿಒ ತಹಶೀಲ್ದಾರ್ಗೆ ಮತ್ತು ಹಿರಿಯಡಕ ಠಾಣೆಗೆ ಮಾಹಿತಿ ರವಾನಿಸಿದರು.
ಹಿರಿಯಡಕ ಎಸ್ಐ ಸಿಬಂದಿಗಳೊಂದಿಗೆ ಸ್ಥಳಕ್ಕೆ ಧಾವಿಸಿ ಆರೋಪಿಯನ್ನು ವಿಚಾರಿಸಿದರು. ನೀರೆ ಹಾಗೂ ಕಣಜಾರು ಗ್ರಾಮಗಳ ಬಿಪಿಎಲ್ ಕುಟುಂಬದವರಿಗೆ ತಿಂಗಳಿಗೆ 50 ಕೆಜಿ ಅಕ್ಕಿ ಸಿಗುತ್ತಿದ್ದು, ಕೆಲವರು ಅದನ್ನು ಈ ವ್ಯಕ್ತಿಗೆ ನೀಡಿ ಕೆಜಿಗೆ 10 ರೂ.ಗಳಂತೆ ಹಣ ಪಡೆಯುತ್ತಿದ್ದರು. ಆತ ಈ ಅಕ್ಕಿಯನ್ನು ಮಿಲ್ನಲ್ಲಿ ಪಾಲಿಷ್ ಮಾಡಿಸಿ ಕುಚ್ಚಲಕ್ಕಿಯನ್ನಾಗಿ ಪರಿವರ್ತಿಸಿ ಅಧಿಕ ಬೆಲೆಗೆ ಮಾರುತ್ತಿದ್ದ ಎನ್ನುವುದು ಬೆಳಕಿಗೆ ಬಂದಿದೆ. ಫುಡ್ ಇನ್ಸ್ಪೆಕ್ಟರ್ ಸುಮತಿ ಸ್ಥಳಕ್ಕೆ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
Kshetra Samachara
02/06/2022 10:26 am