ಉಡುಪಿ: ಬೇರೊಬ್ಬರು ಪ್ರೀತಿ ಯಿಂದ ಸಾಕಿದ ನಾಯಿಯನ್ನು ಗುಂಡಿಟ್ಟು ಕೊಂದ ಆರೋಪದ ಮೇಲೆ ವ್ಯಕ್ತಿಯೊಬ್ಬನನ್ನು ಪೊಲೀಸರು ಬಂಧಿಸಿ ಬಳಿಕ ಬಿಡುಗಡೆಗೊಳಿಸಿದ ಘಟನೆ ಉಡುಪಿಯಲ್ಲಿ ನಡೆದಿದೆ.
ನಿಡಂಬಳ್ಳಿ ನಿವಾಸಿ ಬ್ರಾನ್ ಡಿಸೋಜ ಬಂಧಿತ ಆರೋಪಿ. ಕೆಮ್ಮಣ್ಣು ಮೂಡುತೋನ್ಸೆ ನಿವಾಸಿ ಗುಂಡಪ್ಪ ಪೂಜಾರಿಯವರು ಬೆಳಿಗ್ಗೆ ಕೆಮ್ಮಣ್ಣುವಿನ ಹಾಲು ಡೈರಿಯಿಂದ ವಾಪಸ್ ಮನೆಗೆ ನಡೆದುಕೊಂಡು ಹೋಗುವಾಗ ಮನೆಯ ಸಾಕುನಾಯಿ ಅವರನ್ನು ಹಿಂಬಾಲಿಸಿಕೊಂಡು ಬರುತ್ತಿತ್ತು.
ಕೆಮ್ಮಣ್ಣು ನಿಡಂಬಳ್ಳಿ ಕಲ್ಯಾಣಪುರ ಸಾರ್ವಜನಿಕ ರಸ್ತೆಯಲ್ಲಿ ಹೀಗೆ ಬರುತ್ತಿರುವಾಗ, ನಿಡಂಬಳ್ಳಿ ನಿವಾಸಿ ಬ್ರಾನ್ ಡಿಸೋಜ ಎಂಬಾತ ತನ್ನ ಮನೆಯ ಎದುರು ರಸ್ತೆಯ ಬದಿಯಲ್ಲಿ ನಿಂತು ಕೈಯಲ್ಲಿದ್ದ ಏರ್ ಗನ್ ನಿಂದ ಗುಂಡಪ್ಪ ಪೂಜಾರಿಯವರನ್ನು ಹಿಂಬಾಲಿಸಿಕೊಂಡು ಬರುತ್ತಿದ್ದ ಸಾಕುನಾಯಿಗೆ ಶೂಟ್ ಮಾಡಿದ್ದು, ಶ್ವಾನ ಸ್ಥಳದಲ್ಲೇ ಸಾವನ್ನಪ್ಪಿದೆ.
ಈ ಬಗ್ಗೆ ಗುಂಡಪ್ಪ ಪೂಜಾರಿಯವರು ಮಲ್ಪೆ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಬ್ರಾನ್ ಡಿಸೋಜನನ್ನು ಬಂಧಿಸಿ ಆ ಬಳಿಕ ಬಿಡುಗಡೆ ಮಾಡಲಾಗಿದೆ.
Kshetra Samachara
13/02/2021 11:49 am