ಉಪ್ಪಿನಕುದ್ರುವಿನ ಶಿಲ್ಪಾ ದೇವಾಡಿಗ ಸಾವಿನ ಪ್ರಕರಣದ ಸಂಬಂಧ ದೂರಿನಲ್ಲಿ ಹೆಸರಿಸಲಾಗಿರುವ ಅಝೀಜ್ ಮತ್ತು ಆತನ ಪತ್ನಿಯ ಬಂಧನ ಹಾಗೂ ಪ್ರಕರಣದ ತನಿಖೆಯ ಸಂಬಂಧ ಕುಂದಾಪುರ ಸಿಪಿಐ ಗೋಪಿಕೃಷ್ಣ ನೇತೃತ್ವದಲ್ಲಿ ಎರಡು ತಂಡಗಳನ್ನು ರಚನೆ ಮಾಡಲಾಗಿದೆ ಎಂದು ಉಡುಪಿ ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಟಿ ಸಿದ್ದಲಿಂಗಪ್ಪ ಹೇಳಿದ್ದಾರೆ.
ಮಾಧ್ಯಮಗಳಿಗೆ ಮಾಹಿತಿ ನೀಡಿದ ಅವರು, ಸದ್ಯ ಆರೋಪಿಗಳು ಕುಂದಾಪುರದಿಂದ ತಪ್ಪಿಸಿಕೊಂಡಿದ್ದು ಕಾಸರಗೋಡು ಕಡೆ ತೆರಳಿರುವ ಬಗ್ಗೆ ಮಾಹಿತಿ ಇದೆ. ನಮ್ಮ ಒಂದು ತಂಡ ಅಲ್ಲಿಗೆ ತೆರಳಿದ್ದು ಸದ್ಯದಲ್ಲಿಯೇ ಆರೋಪಿಗಳನ್ನು ಬಂಧಿಸಲಾಗುವುದು. ಆರೋಪಿ ಅಝೀಜ್ ಅವರು ಹಿಂದೆ ಬೇರೆ ಪ್ರಕರಣಗಳಲ್ಲಿ ಭಾಗಿಯಾಗಿರುವ ಕುರಿತು ಇದುವರೆಗೆ ಸ್ಪಷ್ಟ ಮಾಹಿತಿ ಲಭ್ಯವಾಗಿಲ್ಲ. ಅದರ ಕುರಿತು ಪರಿಶೀಲನೆ ನಡೆಯುತ್ತಿದೆ ಎಂದರು. ಶಿಲ್ಪಾ ಅವರು ವಿಷ ಸೇವನೆ ಮಾಡಿದ ಬಳಿಕ ಆಸ್ಪತ್ರೆಗೆ ಸೇರಿದ ವಿಚಾರ ಪೊಲೀಸರಿಗೆ ತಡವಾಗಿ ತಿಳಿದು ಬಂದಿದ್ದು, ಆಕೆಯ ಸಾವಿನ ನಂತರ ಪ್ರಕರಣ ದಾಖಲಾಗಿದ್ದು ಅದರ ಬಳಿಕ ಇಲಾಖೆ ತನ್ನ ಕೆಲಸವನ್ನು ಆರಂಭಿಸಿದೆ. ಅಝೀಜ್ ಮತ್ತು ಶಿಲ್ಪಾ ಪರಸ್ಪರ ಪ್ರೀತಿಸುತ್ತಿದ್ದು ಮದುವೆಯಾಗುವುದಾಗಿ ಹೇಳಿ ಮೋಸ ಮಾಡಿದ್ದು, ಅದೇ ಬೇಸರದಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂಬ ದೂರು ಬಂದಿದೆ.ಸದ್ಯ ಅಝೀಜ್ ಮತ್ತು ಆತನ ಪತ್ನಿ ಸಲ್ಮಾ ಮೇಲೆ ಪ್ರಕರಣ ದಾಖಲಾಗಿದ್ದು ಶೀಘ್ರದಲ್ಲಿಯೇ ಬಂಧಿಸಲಾಗುವುದು ಎಂದರು.
Kshetra Samachara
28/05/2022 01:30 pm