ಬ್ರಹ್ಮಾವರ: ತವರು ಮನೆಗೆ ಹೋಗಿ ಬರುತ್ತೇನೆ ಎಂದು ಹೇಳಿ ಮನೆಯಿಂದ ಹೊರಟ ಮಹಿಳೆಯು ತನ್ನ ಮೂವರು ಮಕ್ಕಳ ಸಹಿತ ನಾಪತ್ತೆಯಾದ ಘಟನೆ ಉಡುಪಿ ಜಿಲ್ಲೆಯ ಬ್ರಹ್ಮಾವರದಲ್ಲಿ ನಡೆದಿದೆ.
ಬ್ರಹ್ಮಾವರ ತಾಲೂಕಿನ ಬಕ್ಕಪಟ್ಟಣದ ಮೊಹಮ್ಮದ್ ಖಲೀಲ್ ಅವರ ಪತ್ನಿ ರಾಸಿಯಾ (32), ಪುತ್ರಿಯರಾದ ಪಾತಿಮಾ ನಶ್ರಾ (11), ಆಯಿಷಾ ಝಿಫ್ರಾ (3) ಹಾಗೂ ಪುತ್ರ ಅಬ್ದುಲ್ ಮುತ್ತಾಹೀರ್ (7) ಕಾಣೆಯಾದವರು. ಮೊಹಮ್ಮದ್ ಖಲೀಲ್ ದಂಪತಿ ಬಾಡಿಗೆ ಮನೆಯೊಂದರಲ್ಲಿ ವಾಸವಾಗಿದ್ದರು. ಡಿಸೆಂಬರ್ 18ರಂದು ಬೆಳಗ್ಗೆ ರಾಸಿಯಾ ತಮ್ಮ ಮೂರು ಮಕ್ಕಳೊಂದಿಗೆ ತವರು ಮನೆಯಾದ ಕುಂದಾಪುರದ ಕಂಡ್ಲೂರಿಗೆ ಹೋಗುವುದಾಗಿ ಹೇಳಿ ಆಟೋ ರಿಕ್ಷಾದಲ್ಲಿ ಬ್ರಹ್ಮಾವರ ಬಸ್ ನಿಲ್ದಾಣಕ್ಕೆ ಹೋಗಿದ್ದಾರೆ. ಮಧ್ಯಾಹ್ನ 3 ಗಂಟೆಯ ಸುಮಾರಿಗೆ ಖಲೀಲ್ ಅವರು ಪತ್ನಿಯ ಮೊಬೈಲ್‌ಗೆ ಕರೆ ಮಾಡಿದಾಗ ಮೊಬೈಲ್ ಸ್ವಿಚ್‌ಆಫ್ ಆಗಿತ್ತು. ತಕ್ಷಣವೇ ಪತ್ನಿ ರಾಸಿಯಾ ತಂದೆಗೆ ಫೋನ್ ಮಾಡಿ ಕೇಳಿದ್ದಾರೆ. ಈ ವೇಳೆ ಅವರು ಮಗಳು ಮನೆಗೆ ಬಂದಿಲ್ಲ ಎಂದು ಹೇಳಿದ್ದಾರೆ.
ಖಲೀಲ್ ಅವರು ತಮ್ಮ ಸಂಬಂಧಿಕರ ಮನೆಯಲ್ಲಿ ಹುಡುಕಾಡಿದ್ದು, ಅಲ್ಲಿ ಕೂಡ ಪತ್ನಿಯ ಸುಳಿವು ಪತ್ತೆಯಾಗಿಲ್ಲ. ಹೀಗಾಗಿ ಬ್ರಹ್ಮಾವರ ಠಾಣೆಯಲ್ಲಿ ದೂರು ನೀಡಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಆರಂಭಿಸಿದ್ದಾರೆ.
Kshetra Samachara
20/12/2020 09:17 pm