ಉಡುಪಿ: ಎಕೆಎಂಎಸ್ ಬಸ್ ಮಾಲೀಕ ಸೈಫುದ್ದೀನ್ ಹತ್ಯೆ ಯತ್ನ ಪ್ರಕರಣಕ್ಕೆ ಸಂಬಂಧಿಸಿ ದಂಪತಿ ಸಹಿತ ಒಂಬತ್ತು ಮಂದಿ ಆರೋಪಿಗಳನ್ನು ಪೊಲೀಸರು ಕಾರ್ಕಳದ ಮುರತ್ತಂಗಡಿಯ ರಿಜೆನ್ಸಿ ಲಾಡ್ಜ್ ನಲ್ಲಿ ಬಂಧಿಸಿದ್ದಾರೆ.
ಕೊಡಗು ವಿರಾಜಪೇಟೆಯ ದರ್ಶನ್ ದೇವಯ್ಯ, ಆತನ ಪತ್ನಿ ಸೌಭಾಗ್ಯ, ಮೂಡಬಿದ್ರೆ ಮಾರ್ನಾಡುವಿನ ಸಂತೋಷ್ ಪೂಜಾರಿ, ಗೋಪಾಲ, ಸೋಮವಾರಪೇಟೆಯ ಅನಿಲ್ ಕುಮಾರ್, ಬೆಳ್ತಂಗಡಿ ಮಾರೋಡಿಯ ಸುಕೇಶ್ ಪೂಜಾರಿ, ಬೆಳ್ತಂಗಡಿ ಟಿ.ಬಿ.ಕ್ರಾಸ್‌ನ ಮೋಹನ, ಕೆ.ಆರ್. ನಗರದ ಸೋಮು, ಪಿರಿಯಾಪಟ್ಟಣದ ಮಹೇಶ್ ಬಾಬು ಬಂಧಿತ ಆರೋಪಿಗಳು.
ಮಲ್ಪೆ ಕೊಡವೂರಿನ ನಿವಾಸಿ ಸೈಪುದ್ದೀನ್ ಹಾಗೂ ಪಾಲುದಾರ ಅಕ್ರಂ ಜೊತೆ ನ.4ರಂದು ಮಣಿಪಾಲ ಲಕ್ಷ್ಮೀಂದ್ರನಗರದಲ್ಲಿನ ಕಚೇರಿಯಲ್ಲಿ ದ್ದಾಗ ಐದು ಮಂದಿ ಆರೋಪಿಗಳು, ಮಾರಕಾಯುಧಗಳೊಂದಿಗೆ ಕಚೇರಿಗೆ ದಾಳಿ ನಡೆಸಿ ಸೈಪುದ್ದೀನ್ ಹತ್ಯೆಗೆ ವಿಫಲ ಯತ್ನ ನಡೆಸಿದ್ದರು. ಈ ವೇಳೆ ಸೈಫುದ್ದೀನ್ ತಪ್ಪಿಸಿ ಕೊಂಡಿದ್ದು, ಆರೋಪಿಗಳು ಅಲ್ಲಿಂದ ಡಸ್ಟರ್ ಕಾರಿನಲ್ಲಿ ಪರಾರಿಯಾಗಿದ್ದರು. ಈ ಬಗ್ಗೆ ಸೈಪುದ್ದೀನ್ ಮಣಿಪಾಲ ಪೊಲೀಸ್ ಠಾಣೆಗೆ ನೀಡಿದ ದೂರಿನಂತೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಚುರುಕುಗೊಳಿಸಿದರು.
ಈ ಸಂಬಂಧ ಎಸ್ಪಿ ಎನ್.ವಿಷ್ಣುವರ್ಧನ, ಉಡುಪಿ ಮತ್ತು ಕಾರ್ಕಳ ಡಿ.ವೈ.ಎಸ್.ಪಿ. ಮತ್ತು ಕುಂದಾಪುರ ಎಎಸ್ಪಿ ನೇತೃತ್ವದ ಮೂರು ಪ್ರತ್ಯೇಕ ತನಿಖಾ ತಂಡಗಳನ್ನು ರಚಿಸಿದ್ದರು. ತನಿಖಾ ತಂಡದ ಅಧಿಕಾರಿಗಳು, ಸಿಬ್ಬಂದಿ ಮಾಹಿತಿ ಸಂಗ್ರಹಿಸಿ ತಲೆಮರೆಸಿಕೊಂಡ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಎಸ್ಪಿ ವಿಷ್ಣುವರ್ಧನ ಮಾರ್ಗದರ್ಶನದಲ್ಲಿ ಹೆಚ್ಚುವರಿ ಎಸ್ಪಿ ಕುಮಾರಚಂದ್ರ ನಿರ್ದೇಶನದಲ್ಲಿ, ಕುಂದಾಪುರ ಎಎಸ್ಪಿ ಹರಿರಾಮ್ ಶಂಕರ್, ಉಡುಪಿ ಡಿವೈಎಸ್ಪಿ ಜೈಶಂಕರ್, ಕಾರ್ಕಳ ಡಿವೈಎಸ್ಪಿ ಭರತ್ ಎಸ್.ರೆಡ್ಡಿ, ಮಣಿಪಾಲ ನಿರೀಕ್ಷಕ ಮಂಜುನಾಥ್ ಗೌಡ, ಕಾರ್ಕಳ ವೃತ್ತ ನಿರೀಕ್ಷಕ ಸಂಪತ್ ಕುಮಾರ್, ಬ್ರಹ್ಮಾವರ ವೃತ್ತ ನಿರೀಕ್ಷಕ ಅನಂತಪದ್ಮನಾಭ, ಡಿಸಿಐಬಿ ನಿರೀಕ್ಷಕ ಮಂಜಪ್ಪ, ಮಣಿಪಾಲ ಎಸ್ಸೈ ರಾಜಶೇಖರ್, ಬ್ರಹ್ಮಾವರ ಎಸ್ಸೈ ರಾಘವೇಂದ್ರ ಸಿ., ಹಿರಿಯಡ್ಕ ಎಸ್ಸೈ ಸುಧಾಕರ ತೋನ್ಸೆ, ಕಾರ್ಕಳ ನಗರ ಎಸ್ಸೈ ಮಧು, ಹೆಬ್ರಿ ಎಸ್ಸೈ ಸುಮಾ ಅವರನ್ನು ಒಳಗೊಂಡ ತಂಡ ಈ ಕಾರ್ಯಾಚರಣೆ ನಡೆಸಿದೆ.
Kshetra Samachara
06/11/2020 10:17 pm