ಉಡುಪಿ : ತಂತ್ರಜ್ಞಾನಗಳು ಬೆಳೆದಂತೆಲ್ಲಾ ಸೈಬರ್ ಕ್ರೈಂಗಳು ಹೆಚ್ಚಾಗುತ್ತಿವೆ.
ಸದ್ಯ ಮಣಿಪಾಲದ ಮಾಹೆ ರಿಜಿಸ್ಟ್ರಾರ್ ವಿಭಾಗಕ್ಕೆ ಮುಖ್ಯಮಂತ್ರಿ ಹೆಸರಿನಲ್ಲಿ ನಕಲಿ ಇಮೇಲ್ ಐಡಿ ಸೃಷ್ಟಿಸಿ ಇಮೇಲ್ ಕಳುಹಿಸಲಾಗಿದೆ.
ಈ ಕುರಿತು ಮಾಹೆ ನಿರ್ದೇಶಕ ಡಾ.ನಾರಾಯಣ ಸಭಾಯಿತ್ ಉಡುಪಿ ಸೆನ್ ಠಾಣೆಗೆ ದೂರು ನೀಡಿದ್ದು ಪ್ರಕರಣ ದಾಖಲಾಗಿದೆ.
cm@karnataka.gov.in ಎಂಬ ಖಾತೆಯಿಂದ ಮಾಹೆಗೆ ಇಮೇಲ್ ಬಂದಿದ್ದು, ‘ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜುಕೇಷನ್ ಸಂಸ್ಥೆಯು ಕಾಲೇಜುಗಳನ್ನು ಆರಂಭಿಸುತ್ತಿರುವ ಬಗ್ಗೆ ಪೋಷಕರು ಹಾಗೂ ವಿದ್ಯಾರ್ಥಿಗಳಿಂದ ದೂರುಗಳು ಬಂದಿವೆ.
ಈಗಿನ ಸದ್ಯದ ಪರಿಸ್ಥಿತಿಯಲ್ಲಿ ಕಾಲೇಜುಗಳನ್ನು ತೆರೆಯುವುದು ಸರಿಯಲ್ಲ. ಜ.1, 2021ರವರೆಗೆ ಕಾಲೇಜುಗಳನ್ನು ಆರಂಭಿಸಬಾರದು.
ನಂತರ ತೆರೆಯಬೇಕಾದರೆ ಪೋಷಕರ ಹಾಗೂ ವಿದ್ಯಾರ್ಥಿಗಳ ಅಭಿಪ್ರಾಯ ಪಡೆಯಬೇಕು ಎಂದು ಇಮೇಲ್ ಮಾಡಲಾಗಿದೆ.
ಇನ್ನು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಕೊಠಡಿ ಸಂಖ್ಯೆ 323 ‘ಎ’ ಮೂರನೇ ಮಹಡಿ, ವಿಧಾನಸೌಧ, ಬೆಂಗಳೂರು’ ಎಂದು ಸಂದೇಶದಲ್ಲಿ ನಮೂದಿಸಲಾಗಿದ್ದು, ಮುಖ್ಯಮಂತ್ರಿಯವರ ಈ-ಮೇಲ್ ಐ.ಡಿ.ಯನ್ನು ಕದ್ದು, ಅದೇ ರೀತಿಯಾಗಿ ಸುಳ್ಳು ಐ.ಡಿ.ಯನ್ನು ಸೃಷ್ಟಿಸಿ, ಸಂದೇಶವನ್ನು ಮುಖ್ಯ ಮಂತ್ರಿಯವರೇ ಕಳುಹಿಸಿದ್ದಾರೆ ಎನ್ನುವಂತೆ ಸಂಸ್ಥೆಗೆ ತಪ್ಪು ಮಾಹಿತಿಯನ್ನು ನೀಡಿರುವುದಾಗಿ ದೂರಿನಲ್ಲಿ ಉಲ್ಲೇಖಿಸಲಾಗಿದೆ.
Kshetra Samachara
05/11/2020 01:48 pm