ಕಾರ್ಕಳ: ಈ ಬಾರಿಯ ಬೇಸಿಗೆಯಲ್ಲಿ ಆರಂಭವಾಗಿರುವ ಮಳೆ ನಿರಂತರವಾಗಿ ಸುರಿಯುತ್ತಿರುವ ಹಿನ್ನಲೆಯಲ್ಲಿ ಪ್ರಮುಖವಾಗಿ ಅಡಿಕೆ ಬೆಳೆಗೆ ಭಾರೀ ಹಾನಿಯಾಗಿದೆ. ಬೇಸಿಗೆಯಲ್ಲೂ ಭಾರೀ ಮಳೆಯಾಗುತ್ತಿದ್ದ ಹಿನ್ನಲೆಯಲ್ಲಿ ಅಡಿಕೆ ಕೃಷಿಕರು ಮಳೆ ಕಡಿಮೆಯಾಗಬಹುದೆನ್ನುವ ಲೆಕ್ಕಾಚಾರದಲ್ಲಿ ಅಡಿಕೆ ಬೋರ್ಡೋ ದ್ರಾವಣ ಸಿಂಪಡಣೆಗೆ ಕಾದರೂ ಮಳೆ ಮಾತ್ರ ಬಿಡುವು ನೀಡದೇ ನಿರಂತರವಾಗಿ ಸುರಿಯುತ್ತಿದ್ದರಿಂದ ಬಹುತೇಕ ಕೃಷಿಕರು ಸಿಂಪಡಣೆ ಮಾಡುವಲ್ಲಿ ತುಂಬಾ ವಿಳಂಬವಾಗಿತ್ತು.
ಇದರ ಪರಿಣಾಮವಾಗಿ ಕೊಳೆರೋಗದಿಂದ ಎಳೆಯ ಅಡಿಕೆಗಳು ಗಣನೀಯ ಪ್ರಮಾಣದಲ್ಲಿ ಉದುರಲಾರಂಭಿಸಿದೆ. ಸಾಮಾನ್ಯವಾಗಿ ಜುಲೈ ಅಂತ್ಯಕ್ಕೆ ಮಳೆ ಪ್ರಮಾಣ ಕಡಿಮೆಯಾಗುತ್ತದೆ ಆದರೆ ಈ ಬಾರಿ ಮಳೆ ಬಿಡುವು ನೀಡದೇ ಹಲವೆಡೆ ಎರಡನೇ ಸಿಂಪಡಣೆಯೂ ಸಾಧ್ಯವಾಗಿಲ್ಲ. ಇದರಿಂದಾಗಿ ಈ ಬಾರಿ ಅಡಿಕೆ ಫಸಲಿನಲ್ಲಿ ಭಾರೀ ನಷ್ಟವಾಗಲಿದೆ ಎಂದು ಅಂದಾಜಿಸಲಾಗಿದೆ.ಇದಲ್ಲದೇ ಬಿಡದೇ ಸುರಿಯುತ್ತಿರುವ ನಿರಂತರ ಮಳೆಯಿಂದಾಗಿ ಬಸಿ ಕಾಲುವೆಗಳಿದ್ದರೂ ಹಲವೆಡೆ ಅಡಿಕೆ ಮರಗಳ ಬುಡದಲ್ಲಿ ನೀರು ಶೇಖರಣೆಯಾಗಿ ಬೇರುಗಳಿಗೆ ಸರಿಯಾಗಿ ಆಮ್ಲಜನಕ ಹಾಗೂ ಪೋಷಕಾಂಶಗಳು ಸಿಗದೇ ಮರಗಳು ಸೊರಗುತ್ತಿವೆ. ಸರಕಾರ ಪ್ರಾಕೃತಿಕ ವಿಕೋಪದಡಿ ಅಡಿಕೆ ಫಸಲು ನಷ್ಟಕ್ಕೆ ಸರಕಾರ ಪರಿಹಾರಧನ ನೀಡಬೇಕೆಂದು ಅಡಿಕೆ ಬೆಳೆಗಾರರ ಒತ್ತಾಯವಾಗಿದೆ.
ಕೊಳೆರೋಗದ ನಷ್ಸ ಅಂದಾಜಿಸಲು ಪ್ರಥಮ ಹಂತದ ಸರ್ವೇ ಮುಕ್ತಾಯ: ಶ್ರೀನಿವಾಸ ಬಿ.ವಿ, ಹಿರಿಯ ಸಹಾಯಕ ನಿದೇಶಕ, ತೋಟಗಾರಿಕಾ ಇಲಾಖೆ
ವಿಪರೀತ ಮಳೆಯಿಂದಾಗಿ ಬಹುತೇಕ ಕಡೆಗಳಲ್ಲಿ ಅಡಿಕೆ ತೋಟಗಳಲ್ಲಿ ಫಸಲು ನಷ್ಟವಾಗಿದೆ. ರೈತರು ಮುನ್ನೆಚ್ಚರಿಕಾ ಕ್ರಮವಾಗಿ ತೋಟಗಳಲ್ಲಿ ನೀರು ನಿಲ್ಲದಂತೆ ನೋಡಿಕೊಳ್ಳಬೇಕು ಅಲ್ಲದೇ ತೋಟವನ್ನು ಸ್ವಚ್ಚವಾಗಿಟ್ಟುಕೊಂಡಲ್ಲಿ ಕೊಳೆರೋಗವನ್ನು ಪರಿಣಾಮಕಾರಿಯಾಗಿ ಹತೋಟಿಗೆ ತರಬಹುದು. ಮಳೆಗಾಲದಲ್ಲಿ ಕೊಳೆರೋಗ ಸರ್ವೇಸಾಮಾನ್ಯ ಆದರೆ ಈ ಬಾರಿ ಅತಿಯಾದ ಮಳೆಯಿಂದ ಅಡಿಕೆ ಫಸಲು ನಷ್ಟ ಸಾಧ್ಯತೆ ಹೆಚ್ಚಾಗಿದೆ. ಈಗಾಗಲೇ ಬ್ರಹ್ಮಾವರ ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿಗಳ ತಂಡ ಕೊಳೆಪೀಡಿತ ಅಡಿಕೆ ತೋಟಗಳಿಗೆ ಭೇಟಿ ನೀಡಿದೆ. ಹಲವೆಡೆ ಶೇ 10ರಿಂದ ಶೇ 60ರವರೆಗೂ ಫಸಲು ನಷ್ಟವಾಗಿದೆ. ಎರಡನೇ ತಂಡ ಅಡಕೆ ಬೆಳೆ ನಷ್ಟದ ಕುರಿತು ಸರ್ವೇ ನಡೆಸಿ ಒಟ್ಟಾರೆಯಾಗಿ ಶೇ 33 ಕ್ಕಿಂತಲೂ ಅಧಿಕ ಫಸಲುನಷ್ಟ ಸಂಭವಿಸಿದ್ದಲ್ಲಿ ಪ್ರಾಕೃತಿಕ ವಿಕೋಪದಡಿ ಪರಿಹಾರ ನೀಡಲು ಅವಕಾಶವಿದೆ ಎಂದು ಕಾರ್ಕಳ ತೋಟಗಾರಿಕಾ ಇಲಾಖೆಯ ಹಿರಿಯ ತೋಟಗಾರಿಕಾ ಸಹಾಯಕ ನಿರ್ದೇಶಕರಾದ ಶ್ರೀನಿವಾಸ ಬಿ.ವಿ ತಿಳಿಸಿದ್ದಾರೆ.
Kshetra Samachara
10/09/2022 12:38 pm