ಕಾರ್ಕಳ: ಕಾರ್ಕಳದ ಜೋಡುರಸ್ತೆಯಲ್ಲಿ ಎರಡು ಬೈಕ್‌ಗಳ ನಡುವೆ ಅಪಘಾತವಾಗಿ ಒಂದು ಬೈಕ್ ಸವಾರ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದು, ಇನ್ನೊಂದು ಬೈಕ್ ಸವಾರ ಚಿಕಿತ್ಸೆ ವೆಚ್ಚ ನೀಡುತ್ತೇನೆಂದು ಭರವಸೆ ನೀಡಿ ಹಣ ನೀಡದೆ ವಂಚಿಸಿರುವ ಪ್ರಕರಣ ಬೆಳಕಿಗೆ ಬಂದಿದೆ.
ಕಾರ್ಕಳ ತಾಲೂಕು ವರಂಗ ಗ್ರಾಮದ ಮುನಿಯಾಲು ಕಾಡುಹೊಳೆ ನಿವಾಸಿ ಸಚಿನ್ ಎಂಬವರು ಸೆ.5 ರಂದು ರಾತ್ರಿ ಕಾರ್ಕಳದಿಂದ ಮುನಿಯಾಲಿಗೆ ಹೋಗುತ್ತಿದ್ದಾಗ ಕಾರ್ಕಳ ತಾಲೂಕಿನ ಕುಕ್ಕುಂದೂರು ಗ್ರಾಮದ ಜೋಡುರಸ್ತೆ ದುರ್ಗಾ ಆರ್ಟ್ಸ್ ಎಂಬಲ್ಲಿ ಸಚಿನ್‌ರವರ ಬೈಕಿಗೆ ವಿನಾಯಕ ನಾಯಕ್ ಎಂಬವರ ಬೈಕ್ ಹಿಂದಿನಿAದ ಬಂದು ಡಿಕ್ಕಿಯಾಗಿತ್ತು.
ಅಪಘಾತಕ್ಕೆ ಸಚಿನ್ ಅವರು ಬೈಕ್ ಸಹಿತ ರಸ್ತೆಗೆ ಬಿದ್ದು ಗಾಯಗೊಂಡಿದ್ದರು. ನಂತರ ಅವರನ್ನು ಚಿಕಿತ್ಸೆಗಾಗಿ ಕಾರ್ಕಳ ಗಾಜ್ರಿಯಾ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಉಡುಪಿಯ ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದರು. ಇನ್ನೊಂದು ಬೈಕ್ ಸವಾರ ವಿನಾಯಕ ನಾಯಕ್ ಸಚಿನ್‌ರವರ ಆಸ್ಪತ್ರೆಯ ಚಿಕಿತ್ಸಾ ವೆಚ್ಚವನ್ನು ಭರಿಸುವುದಾಗಿ ತಿಳಿಸಿದ್ದರು. ಆದರೆ ಅವರು ಈವರೆಗೂ ಚಿಕಿತ್ಸಾ ವೆಚ್ಚವನ್ನು ಭರಿಸದೆ ವಂಚಿಸಿರುವ ಕಾರಣ ಸಚಿನ್ ತಡವಾಗಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಈ ಕುರಿತು ಕಾರ್ಕಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Kshetra Samachara
10/09/2022 10:01 pm