ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ತುಮಕೂರು: ರಸ್ತೆಯಲ್ಲಿ ಬಿದ್ದಿರುವ ಗುಂಡಿಗಳನ್ನು ಮುಚ್ಚುವಂತೆ ಮನವಿ

ತುಮಕೂರು: ಜಿಲ್ಲೆ ಕೈಗಾರಿಕಾ ಹಬ್ ಆಗಿ ಅಭಿವೃದ್ಧಿಯತ್ತ ಸಾಗುತ್ತಿದೆ. ಈ ಹಿನ್ನಲೆಯಲ್ಲಿ ಜಿಲ್ಲೆಯ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಬಿದ್ದಿರುವ ಗುಂಡಿಗಳನ್ನು ಮುಚ್ಚುವುದರ ಜೊತೆಗೆ ಸೇವಾಪಥ ರಸ್ತೆಯ ಕೂಡಲೇ ಸರಿಪಡಿಸುವಂತೆ ಹಾಲಪ್ಪ ಪ್ರತಿಷ್ಠಾನದ ಅಧ್ಯಕ್ಷ ಮುರಳೀಧರ ಹಾಲಪ್ಪ ನೇತೃತ್ವದಲ್ಲಿ ಹಲವಾರು ಕೈಗಾರಿಕಾ ಸಂಘ ಸಂಸ್ಥೆಗಳು, ರೈತ ಸಂಘ, ಸುತ್ತಮುತ್ತಲ ಗ್ರಾಮ ಪಂಚಾಯಿತಿ ಅಧ್ಯಕ್ಷರು, ಸಾರ್ವಜನಿಕರು ಒತ್ತಾಯಿಸಿದ್ದಾರೆ.

ನಗರದ 80 ಅಡಿ ರಸ್ತೆಯಲ್ಲಿರುವ ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಕಚೇರಿಗೆ ಮಂಗಳವಾರ ಭೇಟಿ ನೀಡಿ ರಾಷ್ಟ್ರೀಯ ಹೆದ್ದಾರಿಗಳು ಮತ್ತು ಸೇವಾಪಥ ರಸ್ತೆಗಳ ಅವ್ಯವಸ್ಥೆ ಕುರಿತಂತೆ ಪ್ರಾದೇಶಿಕ ಅಧಿಕಾರಿ ಗಳ ಜೊತೆ ಚರ್ಚೆ ನಡೆಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಹಾಲಪ್ಪ ಪ್ರತಿಷ್ಠಾನದ ಅಧ್ಯಕ್ಷ ಮುರಳೀಧರ ಹಾಲಪ್ಪ, ತುಮಕೂರು ಭಾಗದ ರಾಷ್ಟ್ರೀಯ ಹೆದ್ದಾರಿಗಳು ಸಾವಿಗೆ ರಹದಾರಿಯಾಗಿದ್ದು, ತುಮಕೂರು ಜಿಲ್ಲೆ ರಾಜಧಾನಿ ಬೆಂಗಳೂರಿನ ಹೆಬ್‌ ಆಗಲಿದೆ. ಇಲ್ಲಿ ವಾಹನಗಳ ನಿರಂತರ ಓಡಾಟ ಹೆಚ್ಚಾಗಿದ್ದು, ಇಂತಹ ರಾಷ್ಟ್ರೀಯ ಹೆದ್ದಾರಿಯಲ್ಲಿ ಗುಂಡಿಯ ಬದಲಿಗೆ ರಸ್ತೆಯನ್ನೇ ಹುಡುಕುವಂತಹ ಪರಿಸ್ಥಿತಿ ನಿರ್ಮಾಣ ವಾಗಿ, ಪ್ರತಿ ನಿತ್ಯ ಕನಿಷ್ಠ ಮೂರ್ನಾಲ್ಕು ಅಪಘಾತಗಳು ಸಂಭವಿಸುತ್ತಲೇ ಇರುತ್ತವೆ. ಒಂದು ಕಿ.ಮೀ. ನಲ್ಲಿ ಕನಿಷ್ಠ 500 ಗುಂಡಿಗಳಿದ್ದರೂ ಸಹ ಗುಂಡಿ ಮುಚ್ಚಲು ಯಾವುದೇ ಕ್ರಮ ಕೈಗೊಳ್ಳದಿರುವುದು ವಿಪರ್ಯಾಸವೇ ಸರಿ ಎಂದರು.

ಇತ್ತೀಚೆಗೆ ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರು ಬೆಂಗಳೂರಿಗೆ ಆಗಮಿಸಿದ್ದ ಸಂದರ್ಭದಲ್ಲಿ ಅವರನ್ನು ಭೇಟಿ ಮಾಡಿ ತುಮಕೂರು ಜಿಲ್ಲೆಯ ರಾಷ್ಟ್ರೀಯ ಹೆದ್ದಾರಿಗಳು ಗುಂಡಿಗಳ ಅವ್ಯವಸ್ಥೆ ಯಿಂದ ಹಾಳಾಗುತ್ತಿದೆ. ತಕ್ಷಣ ಸೂಕ್ತ ಕ್ರಮ ಕೈಗೊಳ್ಳಿ ಎಂದು ಮನವಿ ಮಾಡಿದ್ದೇವೆ ಜೊತೆಗೆ ನೆಲಮಂಗಲ ದಿಂದ ಶಿರಾವರೆಗೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಸುಮಾರು 700 ಕ್ಕಿಂತಲೂ ಹೆಚ್ಚು ಗುಂಡಿಗಳು ಬಿದ್ದಿದ್ದು, ಡ್ರೋಣ್ ಮೂಲಕ ಸರ್ವೆ ಮಾಡಿಸಿ ಕೇಂದ್ರ ಸಚಿವರಾದ ನಿತಿನ್ ಗಡ್ಕರಿಯವರಿಗೆ ತಲುಪಿಸಿದ್ದೇವೆ. ಇದಕ್ಕೆ ಸ್ಪಂಧಿಸಿದ ಸಚಿವರು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಜಂಟಿ ಕಾರ್ಯದರ್ಶಿಗಳು ಮತ್ತು ಯೋಜನಾ ನಿರ್ದೇಶಕರನ್ನು ಕರೆಸಿ ತರಾಟೆಗೆ ತೆಗೆದು ಕೊಂಡು ಇನ್ನೊಂದು ವಾರದಲ್ಲಿ ಛಾಯಾ ಚಿತ್ರ ಹಾಗೂ ವಿಡಿಯೋ ಸಮೇತ ವರದಿ ನೀಡುವಂತೆ ತಾಕೀತು ಮಾಡಿದ್ದಾರೆ ಎಂದರು.

ಇಡೀ ರಾಜ್ಯದಲ್ಲೇ ತುಮಕೂರು ಎಲ್ಲಾ ಮೂಲ ಸೌಕರ್ಯ ಗಳನ್ನು ಒಳಗೊಂಡ ಬ್ರಾಂಡ್ ಆಗಿದ್ದು, ಕೈಗಾರಿಕೆ, ರಸ್ತೆ, ನೀರಿನ ಸೌಕರ್ಯ, ಅಂತ ರಾಷ್ಟ್ರೀಯ ವಿಮಾ ನಿಲ್ದಾಣ, ನುರಿತ ಕಾರ್ಮಿಕರು ಸೇರಿ ದಂತೆ ಎಲ್ಲಾ ಮೂಲ ಸೌಕರ್ಯಗಳನ್ನು ಒಳಗೊಂಡ ಜಿಲ್ಲೆ ಯಾಗಿದೆ. ಹೀಗಿರುವಾಗ ರಾಷ್ಟ್ರೀಯ ಹೆದ್ದಾರಿ ರಸ್ತೆಗಳು ಮಾತ್ರವಲ್ಲ, ಸರ್ವೀಸ್ ರಸ್ತೆಗಳ ದುರವಸ್ಥೆ ಹಾಗೂ ಸರಿಯಾಗಿ ನಿರ್ವಹಣೆ ಯಿಲ್ಲದೆ ಮಹಿಳೆ ಯರು, ವೃದ್ದರು ಮಕ್ಕಳು ಓಡಾಡಲು ತುಂಬಾ ತೊಂದರೆ ಅನುಭವಿಸುತ್ತಿದ್ದಾರೆ. ದುರ್ವಾಸನೆ, ಗುಂಡಿಗಳಿಂದ ಕೂಡಿದ ರಸ್ತೆಗಳೇ ಹೆಚ್ಚು, ಇಂತಹ ರಸ್ತೆಗಳಲ್ಲಿ ಸಂಚಾರ ಮಾಡುವುದೇ ದುಸ್ತರವಾಗಿದೆ. ಇದೇ ರಸ್ತೆಯಲ್ಲಿ ಓಡಾಡುವ ಜಾನುವಾರುಗಳ ಕಾಲು ಮುರಿದಿದ್ದು, ಇದಕ್ಕೆ ಪರಿಹಾರ ಯಾರು ಕೊಡುತ್ತಾರೆ ಎಂದು ಮುರಳೀಧರ ಹಾಲಪ್ಪ ಪ್ರಶ್ನಿಸಿದರು.

ಮನವಿಗೆ ಸ್ಪಂಧಿಸಿರುವ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದವರು ನೆಲಮಂಗಲದಿಂದ ಊರುಕೆರೆವರೆಗೂ 6 ಪಥದ ರಾಷ್ಟ್ರೀಯ ಹೆದ್ದಾರಿ ಸುಸಜ್ಜಿತವಾಗಿ ನಿರ್ಮಾಣ ವಾಗುತ್ತಿದ್ದು, ಇನ್ನೆರಡು ತಿಂಗಳಲ್ಲಿ ಕಾಮಗಾರಿ ಆರಂಭಗೊಳ್ಳಲಿದೆ ಎಂದು ಹೇಳಿದ್ದಾರೆ. ಇದರ ಜೊತೆಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿ ಕಾರಿಗಳು ಜಿಲ್ಲೆಯ ರಾಷ್ಟ್ರೀಯ ಹೆದ್ದಾರಿಗಳಲ್ಲಿ 51 ಆಕ್ಸಿಡೆಂಟ್ ಸ್ಪಾಟ್‌ಗಳಿವೆ ಎಂದು ಹೇಳುತ್ತಾರೆ. ಸರ್ಕಾರ ಇತ್ತ ಗಮನ ಹರಿಸಿ ಆಕ್ಸಿಡೆಂಟ್ ಸ್ಪಾಟ್‌ಗಳನ್ನು ಸರಿಪಡಿಸುವಂತೆ ಒತ್ತಾಯಿಸಿದರು.

ಮನವಿಯನ್ನು ಸ್ವೀಕರಿಸಿ ಮಾತನಾಡಿದ ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಪ್ರಾದೇಶಿಕ ಕಚೇರಿಯ ಯೋಜನಾ ಅಧಿಕಾರಿ ಶಿರಿಶ್ ಗಂಗಾಧರ್, ತುಮಕೂರಿನಿಂದ ನೆಲಮಂಗಲದವರೆಗೂ 6 ಪಥದ ರಸ್ತೆ ನಿರ್ಮಾಣಕ್ಕೆ ಅಗ್ರಿಮೆಂಟ್ ಫೆಬ್ರವರಿ ತಿಂಗಳಲ್ಲಿ ಆಗಿದ್ದು, ಸೆಪ್ಟೆಂಬರ್ ತಿಂಗಳಲ್ಲಿ ಕಾಮಗಾರಿ ಆರಂಭ ವಾಗಲಿದೆ. ತುಮಕೂರು ಬೈಪಾಸ್ ರಸ್ತೆ ಎರಡು ತಿಂಗಳಲ್ಲಿ ಕಾಮಗಾರಿ ಆರಂಭಗೊಳ್ಳಲಿದ್ದು, ಅಲ್ಲಿಯವರೆಗೂ ಹೆದ್ದಾರಿಗಳಲ್ಲಿ ಬಿದ್ದಿರುವ ಗುಂಡಿಗಳನ್ನು ಮುಚ್ಚುವಂತಹ ಕಾರ್ಯ ನಡೆಯುತ್ತಿದೆ. ಈಗಾಗಲೇ ಶೇ.50 ರಷ್ಟು ಗುಂಡಿಗಳನ್ನು ಮುಚ್ಚಲಾಗಿದೆ. ಇನ್ನುಳಿದ ಶೇ.50 ರಷ್ಟು ಗುಂಡಿಗಳನ್ನೂ ಸಹ ಮುಚ್ಚುವ ಕಾರ್ಯ ನಡೆಯುತ್ತಿದೆ ಎಂದು ಹೇಳಿದರು.

6 ಪಥದ ರಸ್ತೆ ನಿರ್ಮಾಣವಾಗುವುದರ ಜೊತೆಗೆ ಸುಸಜ್ಜಿತವಾದ ಸೇವಾಪಥ ರಸ್ತೆಯನ್ನೂ ನಿರ್ಮಿಸಲು ಕ್ರಮ ಕೈಗೊಳ್ಳಲಾಗುತ್ತಿದ್ದು, ಇನ್ನು ಕೆಲವೇ ತಿಂಗಳುಗಳಲ್ಲಿ ರಸ್ತೆ ನಿರ್ಮಾಣ ಕಾಮಗಾರಿ ಆರಂಭಗೊಳ್ಳಲಿದೆ ಎಂದು ತಿಳಿಸಿದರು.

ಟೋಲ್ ಶುಲ್ಕ ಅವಧಿಯನ್ನು ವಿಸ್ತರಣೆ ಮಾಡುವಂತೆ ಗುತ್ತಿಗೆದಾರರು ನ್ಯಾಯಾಲಯದ ಮೊರೆ ಹೋಗಿದ್ದರಿಂದ ನ್ಯಾಯಾಲಯ ನವೆಂಬರ್ ವ

ರೆಗೂ ವಿಸ್ತರಣೆ ಮಾಡಿದೆ ಎಂದು ಉತ್ತರಿಸಿದರು.

ಈ ಸಂದರ್ಭದಲ್ಲಿ ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಾಲೀಕರ ಸಂಘದ ಕುರಂದ್ವಾಡ್, ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷ ಎಮ್.ಎನ್. ಲೋಕೇಶ್, ಸತ್ಯಮಂಗಲ ಕೈಗಾರಿಕಾ ಸಂಘ, ಅಂತರಸನಹಳ್ಳಿ ಕೈಗಾರಿಕಾ ಸಂಘ, ಹಿರೇಹಳ್ಳಿ ಕೈಗಾರಿಕಾ ಸಂಘ, ವಸಂತ ನರಸಾಪುರ ಕೈಗಾರಿಕಾ ಸಂಘದ ಪದಾಧಿ ಕಾರಿಗಳು, ಮತ್ತು ಗ್ರಾ.ಪಂ ಮಾಜಿ ಅಧ್ಯಕ್ಷ ನಜೀರ್ ಅಹಮದ್ ಇದ್ದರು.

ವರದಿ ರಾಘವೇಂದ್ರ ದಾಸರಹಳ್ಳಿ, ಪಬ್ಲಿಕ್ ನೆಕ್ಸ್ಟ್, ತುಮಕೂರು

Edited By : Vijay Kumar
Kshetra Samachara

Kshetra Samachara

14/09/2022 12:20 pm

Cinque Terre

4.22 K

Cinque Terre

0