ಸಿಡ್ನಿ: ಆಸ್ಟ್ರೇಲಿಯಾ ವಿರುದ್ಧದ ಟಿ20 ಸರಣಿಯ ಭಾಗವಾಗಿ ಪರ್ತ್‌ನಲ್ಲಿ ಭಾನುವಾರ (ಅ. 9 ರಂದು) ನಡೆದ ಮೊದಲ ಪಂದ್ಯದಲ್ಲಿ ಇಂಗ್ಲೆಂಡ್ ತಂಡವು ರೋಚಕ ಗೆಲುವು ಸಾಧಿಸಿದೆ. ಆದರೆ ಈ ಪಂದ್ಯದಲ್ಲಿ ಆಸ್ಟ್ರೇಲಿಯಾ ಬ್ಯಾಟರ್ ಮ್ಯಾಥ್ಯೂ ವೇಡ್ ನೀಡಿದ ಕ್ಯಾಚ್ ಹಿಡಿಯಲು ಬಂದ ಮಾರ್ಕ್‍ವುಡ್‍ರನ್ನು ತಳ್ಳಿದ ಪ್ರಸಂಗವೊಂದು ವಿವಾದಕ್ಕೆ ಕಾರಣವಾಗಿದೆ. ಇದರಿಂದಾಗಿ ಮ್ಯಾಥ್ಯೂ ವೇಡ್‌ಗೆ ಇಡೀ ಕ್ರಿಕೆಟ್ ಜಗತ್ತೆ ಛೀಮಾರಿ ಹಾಕುತ್ತಿದೆ.
ಹೈಸ್ಕೋರಿಂಗ್ ಮ್ಯಾಚ್‍ನಲ್ಲಿ ಎರಡು ತಂಡಗಳ ಮಧ್ಯೆ ಜಿದ್ದಾಜಿದ್ದಿನ ಕಾದಾಟ ನಡೆಯುತ್ತಿತ್ತು. ಇಂಗ್ಲೆಂಡ್ ನೀಡಿದ 209 ರನ್‌ಗಳ ಬೃಹತ್ ಟಾರ್ಗೆಟ್ ಬೆನ್ನಟ್ಟುತ್ತಿದ್ದ ಆಸ್ಟ್ರೇಲಿಯಾಗೆ ಕೊನೆಯ 22 ಎಸೆತಗಳಲ್ಲಿ 39 ರನ್ ಬೇಕಾಗಿತ್ತು. ವೇಡ್ ಮತ್ತು ಡೇವಿಡ್ ವಾರ್ನರ್ ಬ್ಯಾಟಿಂಗ್ ಮಾಡುತ್ತಿದ್ದರು. 17ನೇ ಓವರ್ ಎಸೆದ ಮಾರ್ಕ್‍ವುಡ್ ಎಸೆತವೊಂದರಲ್ಲಿ ಮ್ಯಾಥ್ಯೂ ವೇಡ್ ಕ್ಯಾಚ್ ನೀಡಿದರು. ಇದು ಸುಲಭದ ಕ್ಯಾಚ್ ಕೂಡ ಆಗಿತ್ತು. ಬೌಲಿಂಗ್ ಮಾಡಿದ ಮಾರ್ಕ್‍ವುಡ್ ಸ್ವತಃ ಕ್ಯಾಚ್ ಹಿಡಿಯಲು ಮುಂದಾಗಿದ್ದರು. ಇನ್ನೇನು ಬಾಲ್ ಕೈ ಸೇರಬೇಕೆಂದಿದ್ದಾಗ ವೇಡ್ ಕೈಗಳಿಂದ ಮಾರ್ಕ್‍ವುಡ್‍ರನ್ನು ತಡೆದರು. ಇದರಿಂದ ಮಾರ್ಕ್‍ವುಡ್ ಕ್ಯಾಚ್ ಕೈಚೆಲ್ಲಿದರು. ಜೊತೆಗೆ ಫೀಲ್ಡಿಂಗ್‍ಗೆ ಅಡ್ಡಿ ಕುರಿತಾಗಿ ಅಸಮಾಧಾನ ಹೊರ ಹಾಕಿದರು.
ಈ ಘಟನೆ ಕುರಿತು ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಚರ್ಚೆಯಾಗುತ್ತಿದೆ. ವೇಡ್ ನಡೆಗೆ ವಿರೋಧ ವ್ಯಕ್ತವಾಗುತ್ತಿದೆ. ಹೀಗೆ ಪಂದ್ಯದಲ್ಲಿ ಕ್ಯಾಚ್ ಕೈಚೆಲ್ಲಿದ ಪರಿಣಾಮ ಬಚಾವ್ ಆಗಿದ್ದ ವೇಡ್ ಆಸ್ಟ್ರೇಲಿಯಾವನ್ನು ಗೆಲ್ಲಿಸಲು ಕೊನೆಯ ಓವರ್ ವರೆಗೂ ಹೋರಾಡಿದರು. ಆದರೆ 19.3 ಎಸೆತದಲ್ಲಿ ದೊಡ್ಡ ಹೊಡೆತಕ್ಕೆ ಕೈಹಾಕಿ ಕೊನೆಗೆ ಕ್ಯಾಚ್ ನೀಡಿ ಔಟ್ ಆದರು. ಅಂತಿಮವಾಗಿ ಆಸ್ಟ್ರೇಲಿಯಾ ಸೋಲು ಕಾಣುವಂತಾಯಿತು. ಇಂಗ್ಲೆಂಡ್ 8 ರನ್‌ಗಳಿಂದ ಜಯಭೇರಿ ಬಾರಿಸಿತು.
PublicNext
10/10/2022 03:53 pm