ಬರ್ನ್: 20 ಗ್ರ್ಯಾಂಡ್ ಸ್ಲಾಮ್ ಪ್ರಶಸ್ತಿಗಳನ್ನು ಗೆದ್ದ ಮೊದಲ ಪುರುಷ ಆಟಗಾರ, ಟೆನಿಸ್ ದಂತಕಥೆ, ಸ್ವಿಟ್ಜರ್ಲ್ಯಾಂಡ್‌ನ ರೋಜರ್ ಫೆಡರರ್, ಲೇವರ್ ಕಪ್ 2022ರ ನಂತರ ನಿವೃತ್ತಿಯಾಗುವ ನಿರ್ಧಾರವನ್ನು ಪ್ರಕಟಿಸಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಅವರು, "ನಿಮ್ಮಲ್ಲಿ ಅನೇಕರಿಗೆ ತಿಳಿದಿರುವಂತೆ, ಕಳೆದ ಮೂರು ವರ್ಷಗಳು ನನಗೆ ಗಾಯಗಳು ಮತ್ತು ಶಸ್ತ್ರಚಿಕಿತ್ಸೆಗಳ ರೂಪದಲ್ಲಿ ಸವಾಲುಗಳನ್ನು ನೀಡಿವೆ. ನಾನು ಸಂಪೂರ್ಣ ಸ್ಪರ್ಧಾತ್ಮಕ ರೂಪಕ್ಕೆ ಮರಳಲು ಶ್ರಮಿಸಿದ್ದೇನೆ. ಆದರೆ ನನ್ನ ಸಾಮರ್ಥ್ಯವೂ ನನಗೆ ತಿಳಿದಿದೆ. ನನಗೆ 41 ವರ್ಷ. ನಾನು 24 ವರ್ಷಗಳಲ್ಲಿ 1,500ಕ್ಕೂ ಹೆಚ್ಚು ಪಂದ್ಯಗಳನ್ನು ಆಡಿದ್ದೇನೆ. ನಾನು ಕನಸು ಕಂಡಿರುವುದಕ್ಕಿಂತಲೂ ಟೆನಿಸ್ ನನ್ನನ್ನು ಉದಾರವಾಗಿ ನಡೆಸಿಕೊಂಡಿದೆ. ಮತ್ತು ಈಗ ನನ್ನ ಸ್ಪರ್ಧಾತ್ಮಕ ವೃತ್ತಿಜೀವನವನ್ನು ಕೊನೆಗೊಳಿಸುವ ಸಮಯ ಬಂದಿದೆ" ಎಂದು ಬರೆದಿದ್ದಾರೆ.
ಫೆಡರರ್ ಅವರು 2003ರಲ್ಲಿ ವಿಂಬಲ್ಡನ್ ಮೂಲಕ ಮೊದಲ ಗ್ರಾಂಡ್ ಸ್ಲಾಮ್ ಗೆದ್ದರು. ಅಂದಿನಿಂದ ಅವರು 6 ಆಸ್ಟ್ರೇಲಿಯನ್ ಓಪನ್, 1 ಫ್ರೆಂಚ್ ಓಪನ್, 8 ವಿಂಬಲ್ಡನ್ ಮತ್ತು 5 ಯುಎಸ್ ಓಪನ್ ಪ್ರಶಸ್ತಿಗಳನ್ನು ಗೆದ್ದು ಇತಿಹಾಸ ಬರೆದಿದ್ದಾರೆ.
PublicNext
16/09/2022 08:47 am