ಮೆಲ್ಬೋರ್ನ್ : ಕಳೆದ ಹಲವಾರು ತಿಂಗಳಿಂದ ಸತತ ಬ್ಯಾಟಿಂಗ್ ವೈಫಲ್ಯ ಅನುಭವಿಸುತ್ತಿರುವ ಆಸ್ಟ್ರೇಲಿಯಾ ಸೀಮಿತ ಓವರ್ಗಳ ಕ್ಯಾಪ್ಟನ್ ಆಯರೋನ್ ಪಿಂಚ್ ಏಕದಿನ ಕ್ರಿಕೆಟ್'ಗೆ ನಿವೃತ್ತಿ ಘೋಷಿಸಿದ್ದಾರೆ.
ಈ ಕುರಿತಂತೆ ಕ್ರಿಕೆಟ್ ಆಸ್ಟ್ರೇಲಿಯಾ ಟ್ವೀಟ್ ಮಾಡಿ ವಿಷಯ ಹಂಚಿಕೊಂಡಿದೆ. ಈ ಮೂಲಕ ಏಕದಿನ ಕ್ರಿಕೆಟ್ನಲ್ಲಿ ಸ್ಫೋಟಕ ಬ್ಯಾಟರ್'ನ ಆಟ ಅಂತ್ಯವಾಗಿದೆ.
ಇದೇ ಭಾನುವಾರ ನಾಳೆ (ಸೆ.11) ನ್ಯೂಜಿಲ್ಯಾಂಡ್ ತಂಡದ ಎದುರು ಕೊನೆಯ ಏಕದಿನ ಪಂದ್ಯ ನಡೆಯಲಿದ್ದು, ಇದಾದ ಬಳಿಕ ಅಂತಾರಾಷ್ಟ್ರೀಯ ಕ್ರಿಕೆಟ್ನಿಂದ ಆಯರೋನ್ ಪಿಂಚ್ ಅವರು ಹೊರಗುಳಿಯಲಿದ್ದಾರೆ.
ಆದರೆ ಪ್ರಸಕ್ತ ವರ್ಷ ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಟಿ.20 ಕ್ರಿಕೆಟ್ನಲ್ಲಿ ತಂಡವನ್ನು ಆಯರೋನ್ ಪಿಂಚ್ ಮುನ್ನಡೆಸಲಿದ್ದಾರೆ. ಕಳೆದ ವರ್ಷ ನಡೆದ ಐಸಿಸಿ ಟಿ.20 ವಿಶ್ವಕಪ್ ಟೂರ್ನಿಯಲ್ಲಿ ನಾಯಕನಾಗಿ ಆಸ್ಟ್ರೇಲಿಯಾ ಕ್ರಿಕೆಟ್ ತಂಡವನ್ನು ಮುನ್ನಡೆಸಿದ್ದ ಫಿಂಚ್, ಚಾಂಪಿಯನ್ ಪಟ್ಟಕ್ಕೇರಿಸಿದ್ದರು.
ಆಯರೋನ್ ಫಿಂಚ್ ಕಳೆದ 7 ಏಕದಿನ ಪಂದ್ಯಗಳ ಇನ್ನಿಂಗ್ಸ್ನಲ್ಲಿ ಕ್ರಮವಾಗಿ 0,5,5,1,15,0,0 ರನ್ ಮಾತ್ರ ಗಳಿಕೆ ಮಾಡಿದ್ದು, ಕಳಪೆ ಫಾರ್ಮ್‌ನಿಂದ ಬಳಲುತ್ತಿದ್ದಾರೆ. ಹೀಗಾಗಿ, ಈ ನಿರ್ಧಾರ ಕೈಗೊಂಡಿದ್ದಾರೆ.
ಆಸ್ಟ್ರೇಲಿಯಾ ತಂಡದ ಪರ ಫಿಂಚ್ ಒಟ್ಟು 145 ಏಕದಿನ ಪಂದ್ಯಗಳನ್ನಾಡಿದ್ದು, 5401 ರನ್ ಗಳಿಸಿದ್ದಾರೆ. ಇದರಲ್ಲಿ 17 ಶತಕ ಸೇರಿಕೊಂಡಿವೆ. 2020ರಲ್ಲಿ ಏಕದಿನ ಕ್ರಿಕೆಟ್ನ ಪ್ಲೇಯರ್ ಆಫ್ ದಿ ಇಯರ್ ಪ್ರಶಸ್ತಿ ಗೆದ್ದಿದ್ದರು. ಜೊತೆಗೆ 2015ರಲ್ಲಿ ಆಸ್ಟ್ರೇಲಿಯಾ ವಿಶ್ವಕಪ್ ವಿಜೇತ ತಂಡದ ಭಾಗವಾಗಿದ್ದರು.
PublicNext
10/09/2022 12:25 pm