ದುಬೈ: ಉತ್ತಮ ಬೌಲಿಂಗ್ ಹಾಗೂ ಸ್ಫೋಟಕ ಬ್ಯಾಟಿಂಗ್ ಸಹಾಯದಿಂದ ಅಘಾನಿಸ್ಥಾನ ತಂಡವು ಶ್ರೀಲಂಕಾ ವಿರುದ್ಧ 8 ವಿಕೆಟ್‌ಗಳಿಂದ ಗೆದ್ದು ಬೀಗಿದೆ.
ಏಷ್ಯಾ ಕಪ್ 2022ರ ಟಿ20 ಟೂರ್ನಿಯ ಉದ್ಘಾಟನಾ ಪಂದ್ಯದಲ್ಲಿ ಶ್ರೀಲಂಕಾ ವಿರುದ್ಧ ಟಾಸ್ ಗೆದ್ದ ಅಫ್ಘಾನಿಸ್ಥಾನ ತಂಡದ ನಾಯಕ ಮೊಹಮ್ಮದ್ ನಬಿ ಬೌಲಿಂಗ್ ಆಯ್ದುಕೊಂಡಿದ್ದರು. ಅದರಂತೆ ಮೊದಲು ಬ್ಯಾಟಿಂಗ್ ಮಾಡಿದ ಲಂಕಾ ತಂಡವು 19.4 ಓವರ್‌ಗಳಲ್ಲಿ 105 ರನ್ ಗಳಿಸಿ ಸರ್ವಪತನ ಕಂಡಿತ್ತು. ತಂಡದ ಭಾನುಕಾ ರಾಜಪಕ್ಸೆ 38 ರನ್, ಚಾಮಿಕಾ ಕರುಣಾರತ್ನೆ 31 ರನ್ ಹಾಗೂ ದನುಷ್ಕ ಗುಣತಿಲಕ 17 ರನ್ ಗಳಿಸಿದ್ದರು. ಉಳಿದ ಬ್ಯಾಟರ್‌ಗಳು 10 ರನ್‌ಗಳ ಗಡಿ ದಾಟಲು ವಿಫಲರಾಗಿದ್ದರು.
ಬಳಿಕ ಬ್ಯಾಟಿಂಗ್ ಮಾಡಿದ ಅಫ್ಘಾನ್ ತಂಡವು 10.1 ಓವರ್‌ಗಳಲ್ಲಿ 2 ವಿಕೆಟ್ ನಷ್ಟಕ್ಕೆ 106 ದಾಖಲಿಸಿ ಗೆದ್ದು ಬೀಗಿದೆ. ತಂಡದ ಪರ ಹಜರತುಲ್ಲಾ ಝಝೈ ಅಜೇಯ 37 ರನ್ (28 ಎಸೆತ), ರಹಮಾನುಲ್ಲಾ ಗುರ್ಬಾಜ್ 40 ರನ್ (18 ಎಸೆತ) ಹಾಗೂ ಇಬ್ರಾಹಿಂ ಜದ್ರಾನ್ 15 ರನ್ ಗಳಿಸಿ ತಂಡಕ್ಕೆ ಗೆಲುವು ತಂದುಕೊಟ್ಟರು.
ಇದಕ್ಕೂ ಮುನ್ನ ಅಫ್ಘಾನ್ ತಂಡದ ಪರ ಫಜಲ್ಹಕ್ ಫಾರೂಕಿ 3 ವಿಕೆಟ್ ಉರುಳಿಸಿದ್ದರೆ, ನಾಯಕ ಮೊಹಮ್ಮದ್ ನಬಿ, ಮುಜೀಬ್ ಉರ್ ರೆಹಮಾನ್ ತಲಾ 2 ವಿಕೆಟ್ ಪಡೆದುಕೊಂಡಿದ್ದರೆ, ನವೀನ್-ಉಲ್-ಹಕ್ 1 ವಿಕೆಟ್ ಕಿತ್ತು ಮಿಂಚಿದ್ದರು.
PublicNext
27/08/2022 10:27 pm