ದುಬೈ: ಟೀಂ ಇಂಡಿಯಾ ಮಾಜಿ ನಾಯಕ ವಿರಾಟ್ ಕೊಹ್ಲಿ ಅವರು ಈ ವರ್ಷ ಅವರು ಕಳಪೆ ಫಾರ್ಮ್‌ನಿಂದಾಗಿ ಅನೇಕ ಸರಣಿಗಳಿಂದ ದೂರವಾಗಿದ್ದರು. ಇಂಗ್ಲೆಂಡ್ ಪ್ರವಾಸ ಮುಗಿದ ಬಳಿಕ ಒಂದು ತಿಂಗಳ ಕಾಲ ಕ್ರಿಕೆಟ್‌ಗೆ ವಿರಾಮ ಘೋಷಿಸಿ ಕುಟುಂಬದೊಂದಿಗೆ ಕಾಲ ಕಳೆದರು. ಏಷ್ಯಾಕಪ್ ಮೂಲಕ ಮತ್ತೊಮ್ಮೆ ಭಾರತ ತಂಡಕ್ಕೆ ರೀ ಎಂಟ್ರಿ ಕೊಡಲು ಸಿದ್ಧರಾಗಿದ್ದಾರೆ.
ಈ ಹಿನ್ನೆಲೆಯಲ್ಲಿ ಸ್ಪೋರ್ಟ್ಸ್ ವಾಹಿನಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಕೊಹ್ಲಿ, ತಮ್ಮ ವೃತ್ತಿ ಮತ್ತು ವೈಯಕ್ತಿಕ ವಿಷಯಗಳ ಬಗ್ಗೆ ಪ್ರಮುಖ ಅಂಶಗಳನ್ನು ಬಹಿರಂಗಪಡಿಸಿದರು. ಆ ಮೂಲಕ ತಮ್ಮ ಇಷ್ಟು ದಿನದ ಕಷ್ಟವನ್ನು ಹೇಳಿಕೊಂಡಿದ್ದಾರೆ.
'ನಿಮ್ಮೆಲ್ಲರಿಗೂ ನಾನು ಕಠಿಣ ವ್ಯಕ್ತಿಯಂತೆ ಕಾಣಿಸಬಹುದು. ಆದರೆ ನಾನು ಮಾನಸಿಕವಾಗಿ ನೊಂದಿದ್ದೇನೆ. ನಾನು ನನ್ನನ್ನು ಅರ್ಥಮಾಡಿಕೊಳ್ಳಲು ವಿಫಲನಾದೆ. ನನ್ನ ದೇಹ ಸಂಪೂರ್ಣ ದಣಿದಿತ್ತು. ಹೀಗಾಗಿ ಕೆಲ ದಿನಗಳ ಕಾಲ ಕ್ರಿಕೆಟ್‌ಗೆ ವಿರಾಮ ಘೋಷಿಸಿದ್ದೆ. ನಾನು ನಿಮ್ಮಂತೆ ಸಾಮಾನ್ಯ ಮನುಷ್ಯ. ನನಗೂ ಕೆಲವು ಮಿತಿಗಳಿವೆ. ನಾನು ಮಾನಸಿಕವಾಗಿ ಮತ್ತು ದೈಹಿಕವಾಗಿ ದಣಿದಿದ್ದೆ. ಅದಕ್ಕಾಗಿಯೇ ನಾನು ಕ್ರಿಕೆಟ್‌ನಿಂದ ವಿರಾಮ ತೆಗೆದುಕೊಂಡೆ' ಎಂದು ಹೇಳಿದ್ದಾರೆ.
10 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ನಾನು ಒಂದು ತಿಂಗಳುಗಳ ಕಾಲ ಬ್ಯಾಟ್ ಹಿಡಿಯದೆ ಇರುವುದು. ಕೆಲವೊಮ್ಮೆ ನಿಮ್ಮ ದೇಹ ಮತ್ತು ಮನಸ್ಸಿನ ಮಾತನ್ನು ಕೇಳಬೇಕಾಗುತ್ತದೆ. ಎಲ್ಲರ ಹಾಗೇ ನಾನೂ ಸಹ ಮಾನಸಿಕವಾಗಿ ಕುಗ್ಗಿದ್ದೆ. ನನಗೆ ಇದನ್ನು ಹೇಳಿಕೊಳ್ಳಲು ಯಾವುದೇ ಹಿಂಜರಿಕೆಯಲ್ಲ ಎಂದು ಕೊಹ್ಲಿ ಹೇಳಿದ್ದಾರೆ.
PublicNext
27/08/2022 07:47 pm