ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕೊಹ್ಲಿಯ ಆಟವನ್ನು ಪ್ರಶ್ನಿಸುತ್ತೀರಾ? ಕಪಿಲ್ ದೇವ್‌ಗೆ ರೋಹಿತ್ ಶರ್ಮಾ ತಿರುಗೇಟು

ನಾಟಿಂಗ್‌ಹ್ಯಾಮ್‌: ವಿರಾಟ್‌ ಕೊಹ್ಲಿ ಅವರ ಕಳಪೆ ಲಯ ಕಂಡು ಅವರನ್ನು ತಂಡದಿಂದ ಕೈಬಿಡಬೇಕು ಎಂದು ಭಾರತದ ಹಲವು ಮಾಜಿ ಕ್ರಿಕೆಟಿಗರು ಅಭಿಪ್ರಾಯ ಪಟ್ಟಿದ್ದಾರೆ. 1983ರಲ್ಲಿ ಭಾರತಕ್ಕೆ ಚೊಚ್ಚಲ ವಿಶ್ವಕಪ್‌ ಗೆದ್ದುಕೊಟ್ಟ ಕ್ಯಾಪ್ಟನ್‌ ಕಪಿಲ್‌ ದೇವ್‌, ಅಜಯ್ ಜಡೇಜಾ ಮತ್ತು ವೆಂಕಟೇಶ್‌ ಪ್ರಸಾದ್‌ ಟೀಂ ಇಂಡಿಯಾ ಪ್ಲೇಯಿಂಗ್ ಇಲೆವೆನ್‌ನಲ್ಲಿ ವಿರಾಟ್‌ ಕೊಹ್ಲಿಗೆ ನೀಡಲಾಗುತ್ತಿರುವ ಅವಕಾಶಗಳನ್ನು ಪ್ರಶ್ನೆ ಮಾಡಿದ್ದಾರೆ. ಹೊಸ ಆಟಗಾರರು ಅದ್ಧೂರಿ ಪ್ರದರ್ಶನ ನೀಡುತ್ತಿರುವಾಗ ಸೀಮಿತ ಓವರ್‌ಗಳ ಕ್ರಿಕೆಟ್‌ನಲ್ಲಿ ವಿರಾಟ್‌ ಕೊಹ್ಲಿ ಅವರನ್ನು ಆಡುವ ಹನ್ನೊಂದರ ಬಳಗಕ್ಕೆ ಸೇರಿಸಬಾರದು ಎಂದೇ ಅಭಿಪ್ರಾಯ ಪಟ್ಟಿದ್ದಾರೆ.

ವಿರಾಟ್‌ ಬ್ಯಾಟಿಂಗ್‌ ಬಗ್ಗೆ ಕಟುವಾಗಿ ಟೀಕಿಸಿದ್ದ ಕಪಿಲ್‌ ದೇವ್‌, ವಿದೇಶಿ ಟೆಸ್ಟ್‌ ಪಂದ್ಯಗಳಲ್ಲಿ ಆರ್‌.ಅಶ್ವಿನ್ ಅವರನ್ನು ಆಡುವ ಹನ್ನೊಂದರ ಬಳಗದಿಂದ ಕೈಬಿಡುವಂತೆ ಹಾಗೂ ಟಿ20 ಕ್ರಿಕೆಟ್‌ನಲ್ಲಿ ವಿರಾಟ್ ಕೊಹ್ಲಿ ಅವರನ್ನು ಹೊರಗಿಡಬಾರದೇಕೆ? ಎಂದು ಪ್ರಶ್ನಿಸಿದ್ದರು. ಇದಕ್ಕೆ ಪರೋಕ್ಷವಾಗಿ ಉತ್ತರ ಕೊಟ್ಟಿರುವ ಟೀಂ ಇಂಡಿಯಾ ಹಾಲಿ ನಾಯಕ ರೋಹಿತ್ ಶರ್ಮಾ ಮಾಜಿ ನಾಯಕನಿಗೆ ಟಾಂಗ್ ಕೊಟ್ಟಿದ್ದಾರೆ.

"ಪರಿಣತರು ಎಂದನ್ನಿಸಿಕೊಂಡವರು ಹೊರಗಿನಿಂದ ಆಟವನ್ನು ನೋಡುತ್ತಿದ್ದಾರೆ. ಆದರೆ ತಂಡದ ಒಳಗೆ ಏನಾಗುತ್ತಿದೆ ಎಂಬುದು ಅವರಿಗೆ ಗೊತ್ತಿಲ್ಲ. ನಾವು ಒಂದು ತಂಡ ಕಟ್ಟಿದ್ದೇವೆ ಎಂದರೆ ಅದರ ಹಿಂದೆ ಸಾಕಷ್ಟು ಚಿಂತನೆ ನಡೆದಿರುತ್ತದೆ. ನಮ್ಮ ಆಟಗಾರರನ್ನು ಬೆಂಬಲಿಸುತ್ತೇವೆ. ಅವರಿಗೆ ಅಗತ್ಯದ ಅವಕಾಶಗಳನ್ನು ಕೊಡುತ್ತೇವೆ. ಹೊರಗಿನವರಿಗೆ ಈ ಸಂಗತಿಗಳು ತಿಳಿಯುವುದಿಲ್ಲ. ಹೊರಗೆ ಏನಾಗುತ್ತಿದೆ ಎಂಬುದು ನಮಗೆ ಮುಖ್ಯವಲ್ಲ. ಒಳಗೆ ಏನಾಗುತ್ತಿದೆ ಎಂಬುದಷ್ಟೇ ಮುಖ್ಯ," ಎಂದು 3ನೇ ಟಿ20 ಪಂದ್ಯದ ಬಳಿಕ ಮಾತನಾಡಿದ ರೋಹಿತ್ ಶರ್ಮಾ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.

"ಲಯದ ಬಗ್ಗೆ ಮಾತನಾಡುವುದಾದರೆ ಎಲ್ಲ ಆಟಗಾರರು ಏಳು-ಬೀಳನ್ನು ಕಂಡಿದ್ದಾರೆ. ಆಟಗಾರನ ಗುಣಮಟ್ಟಕ್ಕೆ ಹಾನಿಯಾಗಿಲ್ಲ ಎಂಬುದಷ್ಟೇ ಇಲ್ಲಿ ಗಮನಿಸಬೇಕು. ಈ ಸಂಗತಿಗಳನ್ನು ನಮ್ಮ ತಲೆಯಲ್ಲಿ ಇಟ್ಟಿಕೊಳ್ಳಬೇಕಾಗುತ್ತದೆ. ಹಲವು ವರ್ಷಗಳ ಕಾಲ ಅದ್ಭುತ ಆಟವಾಡಿರುವ ಆಟಗಾರ, ಒಂದೆರಡು ವರ್ಷ ಲಯ ಕಳೆದುಕೊಂಡೆರೆ ಆತ ಕೆಟ್ಟ ಆಟಗಾರ ಆಗುವುದಿಲ್ಲ. ಆತನ ಈ ಹಿಂದಿನ ಪ್ರದರ್ಶನಗಳನ್ನು ಕಡೆಗಣಿಸಬಾರದು. ಆಟಗಾರನ ಮಹತ್ವ ಏನು ಎಂಬುದನ್ನು ಅರಿತಿರುವ ತಂಡ ನಮ್ಮದು. ಹೊರಗಿನವರಿಗೆ ಮಾತನಾಡಲು ಎಲ್ಲ ಅಧಿಕಾರ ಇದೆ. ಆದರೆ, ಅದ್ಯಾವುದಕ್ಕೂ ನಾವು ತಲೆ ಕೆಡಿಸಿಕೊಳ್ಳುವುದಿಲ್ಲ," ಎಂದು ಕಪಿಲ್‌ ದೇವ್‌ ಹೇಳಿಕೆಗೆ ರೋಹಿತ್‌ ಶರ್ಮಾ ಖಡಕ್ ಉತ್ತರ ಕೊಟ್ಟಿದ್ದಾರೆ.

Edited By : Vijay Kumar
PublicNext

PublicNext

11/07/2022 10:58 pm

Cinque Terre

23.74 K

Cinque Terre

0