20.2 ಅಡಿ ಪೋಲ್ ವಾಲ್ಟ್ : ವಿಶ್ವದಾಖಲೆ ಬರೆದ ಮೊಂಡೋ ಡುಪ್ಲಾಂಟಿಸ್
ಪೋಲ್ ವಾಲ್ಟ್ ಕ್ರೀಡೆಯಲ್ಲಿ ಸ್ವೀಡನ್ ದೇಶದ ಪೋಲ್ ವಾಲ್ಟರ್ ಅರ್ಮಾಂಡ್ ಮೋಂಡೋ ಡುಪ್ಲಾಂಟಿಸ್
ವಿಶ್ವ ದಾಖಲೆಯನ್ನು ನಿರ್ಮಿಸಿದ್ದಾರೆ. ಜೂನ್ 30ರ ಗುರುವಾರದಂದು ಸ್ವೀಡನ್ ದೇಶದ ರಾಜಧಾನಿ ಸ್ಟಾಕ್ಹೋಮ್ ನಗರದಲ್ಲಿ ನಡೆದ ಡೈಮಂಡ್ ಲೀಗ್ ಕ್ರೀಡಾಕೂಟದಲ್ಲಿ ಭಾಗವಹಿಸಿದ್ದ ಮೋಂಡೋ ಡುಪ್ಲಾಂಟಿಸ್ 6.16 ಮೀಟರ್ ಎತ್ತರಕ್ಕೆ ಹೊರಾಂಗಣ ಪೋಲ್ ವಾಲ್ಟ್ ಕ್ರೀಡೆಯಲ್ಲಿ ಜಿಗಿದಿದ್ದಾರೆ.
ಅಂದರೆ 20 ಅಡಿ 2.5 ಇಂಚು ಎತ್ತರಕ್ಕೆ ಮೊಂಡೋ ಡುಪ್ಲಾಂಟಿಸ್ ಪೋಲ್ ವಾಲ್ಟ್ ಮಾಡಿದ್ದು, ಇದು ಹೊರಾಂಗಣ ಪೋಲ್ ವಾಲ್ಟ್ ಕ್ರೀಡೆಯಲ್ಲಿ ನಿರ್ಮಾಣವಾದ ನೂತನ ವಿಶ್ವ ದಾಖಲೆಯಾಗಿದೆ. ಹೀಗೆ ವಿಶ್ವ ದಾಖಲೆ ನಿರ್ಮಿಸಿರುವ ಮೊಂಡೋ ಡುಪ್ಲಾಂಟಿಸ್ ತಮ್ಮದೇ ಹಳೆ ದಾಖಲೆಯನ್ನು ಪುಡಿಪುಡಿ ಮಾಡಿದ್ದಾರೆ. ಸದ್ಯ ಮೊಂಡೋ ಡುಪ್ಲಾಂಟಿಸ್ 6.16 ಮೀಟರ್ ಎತ್ತರಕ್ಕೆ ಪೋಲ್ ವಾಲ್ಟ್ ಮಾಡಿ ಜಿಗಿದಿರುವ ಮೈನವಿರೇಳಿಸುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಇನ್ನು ಇದೇ ವರ್ಷ ಸರ್ಬಿಯಾದಲ್ಲಿ ನಡೆದಿದ್ದ ವಿಶ್ವ ಒಳಾಂಗಣ ಚಾಂಪಿಯನ್ ಶಿಪ್ ಕ್ರೀಡಾಕೂಟದಲ್ಲಿ ಭಾಗವಹಿಸಿದ್ದ ಮೊಂಡೋ ಡುಪ್ಲಾಂಟಿಸ್ 6.20 ಮೀಟರ್ ಎತ್ತರಕ್ಕೆ ಪೋಲ್ ವಾಲ್ಟ್ ನಲ್ಲಿ ಜಿಗಿದಿದ್ದರು. ಅಂದರೆ ಬರೋಬ್ಬರಿ 20 ಅಡಿ 4 ಇಂಚು ಎತ್ತರಕ್ಕೆ ಮೊಂಡೋ ಡುಪ್ಲಾಂಟಿಸ್ ಪೋಲ್ ವಾಲ್ಟ್ ಮಾಡಿದ್ದರು. ಇದು ಒಳಾಂಗಣ ಪೋಲ್ ವಾಲ್ಟ್ ನಲ್ಲಿ ವಿಶ್ವದಾಖಲೆ ಎನಿಸಿಕೊಂಡಿದೆ.
PublicNext
04/07/2022 07:45 pm