ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕ್ರಿಕೆಟ್‌ ಬಿಟ್ಟು ಬಟ್ಟೆ-ಶೂ ಅಂಗಡಿ ತೆರೆದ ಐಸಿಸಿ ಪ್ಯಾನೆಲ್‌ ಅಂಪೈರ್ ಅಸದ್ ರೌಫ್!

ಲಾಹೋರ್: ಐಸಿಸಿಯ ಎಲೈಟ್ ಪ್ಯಾನೆಲ್ ಅಂಪೈರ್ ಆಗಿ, ನೂರಕ್ಕೂ ಹೆಚ್ಚು ಅಂತರರಾಷ್ಟ್ರೀಯ ಕ್ರಿಕೆಟ್ ಪಂದ್ಯಗಳಲ್ಲಿ ಮೈದಾನದ ತೀರ್ಪುಗಾರರಾಗಿದ್ದ ಪಾಕಿಸ್ತಾನದ ಅಸದ್ ರೌಫ್ ಪ್ರಸ್ತುತ ಲಾಹೋರ್‌ನ ಲಾಂಡಾ ಬಜಾರ್‌ನಲ್ಲಿ ಶೂ-ಚಪ್ಪಲಿ, ಬಟ್ಟೆ ಹೀಗೆ ಎರಡು ಅಂಗಡಿಗಳನ್ನು ಇಟ್ಟುಕೊಂಡು ವ್ಯಾಪಾರ ನಡೆಸುತ್ತಿರುವ ಬಗ್ಗೆ ಸ್ಥಳೀಯ ಮಾಧ್ಯಮ ವರದಿ ಮಾಡಿದೆ. ಇದೇ ವೇಳೆ ಅವರು ಭಾವೋದ್ರಿಕ್ತನಾಗಿ ಮಾತನಾಡಿದ್ದಾರೆ.

2000ರಿಂದ 2013ರವರೆಗೆ ಅಸದ್ ರೌಫ್, 170 ಅಂತರರಾಷ್ಟ್ರೀಯ ಪಂದ್ಯಗಳಲ್ಲಿ ಅಂಪೈರ್ ಆಗಿ ಕಾರ್ಯನಿರ್ವಹಿಸಿದ್ದಾರೆ. ಇದರಲ್ಲಿ 49 ಟೆಸ್ಟ್‌ಗಳು, 98 ಏಕದಿನ ಪಂದ್ಯಗಳು ಹಾಗೂ 23 ಟಿ20 ಪಂದ್ಯಗಳಲ್ಲಿ ಅವರು ಅಂಪೈರ್‌ ಸೇವೆ ಸಲ್ಲಿಸಿದ್ದಾರೆ. ಇದರ ಜೊತೆಗೆ ಐಸಿಸಿ ಅಂಪೈರ್‌ಗಳ ಎಲೈಟ್‌ ಪ್ಯಾನೆಲ್‌ನಲ್ಲಿಯೂ ಅವರು ಕಾರ್ಯನಿರ್ವಹಿಸಿದ್ದಾರೆ.

ತಮ್ಮ ಅಂಪೈರ್‌ ವೃತ್ತಿ ಜೀವನದ ಅವಧಿಯಲ್ಲಿ ಅಸದ್‌ ರೌಫ್ ಅಗ್ರ ಸ್ಥಾನದಲ್ಲಿದ್ದರು ಹಾಗೂ ಸಾಕಷ್ಟು ಖ್ಯಾತಿಯನ್ನು ಗಳಿಸಿದ್ದರು. ಆದರೆ, 2013ರ ಇಂಡಿಯನ್‌ ಪ್ರೀಮಿಯರ್ ಲೀಗ್‌ ಟೂರ್ನಿಯ ವೇಳೆ ಮ್ಯಾಚ್ ಫಿಕ್ಸಿಂಗ್ ಆರೋಪಕ್ಕೆ ಒಳಗಾಗಿದ್ದರಿಂದ ಅವರು ತಮ್ಮ ಅಂಪೈರ್ ವೃತ್ತಿ ಜೀವನಕ್ಕೆ ಗುಡ್‌ಬೈ ಹೇಳಬೇಕಾಯಿತು.

ಈ ಬಗ್ಗೆ ಮಾತನಾಡಿರುವ ಅಸದ್‌ ರೌಫ್, "ನನ್ನ ಜೀವನದಲ್ಲಿ ನಾನು ಸಾಕಷ್ಟು ಪಂದ್ಯಗಳಲ್ಲಿ ಅಂಪೈರ್ ಆಗಿ ಕೆಲಸ ಮಾಡಿದ್ದೇನೆ. 2013ರ ಈ ಘಟನೆ ಬಳಿಕ ಕ್ರಿಕೆಟ್‌ ಆಟದಿಂದ ದೂರ ಉಳಿದಿದ್ದೇನೆ. ಏಕೆಂದರೆ, ಒಮ್ಮೆ ನಾನು ಏನನ್ನಾದರೂ ಬಿಟ್ಟರೆ, ಅದನ್ನು ಸಂಪೂರ್ಣವಾಗಿ ಬಿಟ್ಟು ಬಿಡುವ ಮನಸ್ಥಿತಿ ನನ್ನದು" ಎಂದು ತಿಳಿಸಿದ್ದಾರೆ.

"ಐಪಿಎಲ್ ಪಂದ್ಯಗಳ ಅವಧಿಯಲ್ಲಿ ನಾನು ಅತ್ಯುತ್ತಮ ಸಮಯವನ್ನು ಕಳೆದಿದ್ದೇನೆ. ಇದಾದ ಬಳಿಕ ಈ ಘಟನೆಗಳು ನನ್ನ ಪಾಲಿಗೆ ನಡೆದಿದ್ದವು. ಈ ಸಮಸ್ಯೆಗಳಿಂದಾಗಿ ನಾನು ಏನೂ ಮಾಡಲಾಗಿಲ್ಲ. ಬಿಸಿಸಿಐ ಕಡೆಯಿಂದ ನನ್ನ ಮೇಲೆ ಆರೋಪಗಳು ಕೇಳಿ ಬಂದಿದ್ದವು. ಅವರೇ ನನ್ನ ಮೇಲೆ ನಿರ್ಧಾರಗಳನ್ನು ತೆಗೆದುಕೊಂಡಿದ್ದರು" ಎಂದು ಹೇಳಿದ್ದಾರೆ.

"ಇದು ನನಗಾಗಿ ಅಲ್ಲ, ನನ್ನ ಅಂಗಡಿಯಲ್ಲಿ ಕೆಲಸ ಮಾಡುತ್ತಿರುವ ದಿನಗೂಲಿ ಸಿಬ್ಬಂದಿಗಾಗಿ ನಾನು ಕೆಲಸ ಮಾಡುತ್ತಿದ್ದೇನೆ. ಹಣ ಮಾಡಬೇಕೆಂಬ ದುರಾಸೆಯೂ ನನಗಿಲ್ಲ. ಏಕೆಂದರೆ ನನ್ನ ಬಳಿ ಸಾಕಷ್ಟು ಹಣವಿದೆ ಹಾಗೂ ಎಲ್ಲಾ ದೃಷ್ಟಿಕೋನದಿಂದಲೂ ಪ್ರಪಂಚವನ್ನು ಅವಲೋಕಿಸಿದ್ದೇನೆ. ನನಗೆ ಒಬ್ಬ ವಿಶೇಷ ಮಗನಿದ್ದಾನೆ ಹಾಗೂ ಮತ್ತೊಬ್ಬ ಅಮೆರಿಕದಲ್ಲಿ ವಿದ್ಯಾಭ್ಯಾಸ ಮುಗಿಸಿ ಬಂದಿದ್ದಾನೆ. ಒಂದು ದಿನಕ್ಕೆ ನಾನು ಹಾಗೂ ನನ್ನ ಪತ್ನಿ ಐದು ಬಾರಿ ನಮಾಝ್ ಓದುತ್ತೇವೆ" ಎಂದು ಅಸದ್ ರೌಫ್‌ ಹೇಳಿಕೊಂಡಿದ್ದಾರೆ.

Edited By : Vijay Kumar
PublicNext

PublicNext

25/06/2022 07:58 am

Cinque Terre

88.74 K

Cinque Terre

3

ಸಂಬಂಧಿತ ಸುದ್ದಿ