ಮುಂಬೈ: ರಾಜಸ್ಥಾನ ರಾಯಲ್ಸ್ ತಂಡದ ಸ್ಫೋಟಕ ಬ್ಯಾಟರ್ ಶಿಮ್ರಾನ್ ಹೆಟ್ಮೆಯರ್ ಅವರು ರಾಜಸ್ಥಾನ ರಾಯಲ್ಸ್ ಶಿಬಿರವನ್ನು ತೊರೆದು ದಿಢೀರ್ ಆಗಿ ತವರು ದಕ್ಷಿಣ ಅಮೆರಿಕದ ಗಯಾನಾಗೆ ಪ್ರಯಾಣಿಸಿದ್ದಾರೆ. ಆದರೆ ಅದಕ್ಕೆ ಕಾರಣವೂ ಇದೆ ಎಂದು ರಾಜಸ್ಥಾನ್ ರಾಯಲ್ಸ್ ಹೇಳಿದೆ.
ಈ ಸಂಬಂಧ ಆರ್‌ಆರ್ ತಂಡವು ಶಿಮ್ರಾನ್ ಹೆಟ್ಮೆಯರ್ ಮಾತನಾಡಿರುವ ವಿಡಿಯೋ ಟ್ವೀಟ್ ಮಾಡಿದೆ. 'ಶಿಮ್ರಾನ್ ಹೆಟ್ಮೆಯರ್ ಅವರು ತಮ್ಮ ಮೊದಲ ಮಗುವಿನ ಜನನ ಸನ್ನಿಹಿತವಾದ ಕಾರಣ, ಭಾನುವಾರ ಮುಂಜಾನೆ ಗಯಾನಾಗೆ ಹಿಂತಿರುಗಿದ್ದಾರೆ, ಆದರೆ ಅವರು ಶೀಘ್ರದಲ್ಲೇ ಹಿಂತಿರುಗುತ್ತಾರೆ' ಎಂದು ಶೀರ್ಷಿಕೆಯಾಗಿ ರಾಜಸ್ಥಾನ್ ರಾಯಲ್ಸ್ ಬರೆದಿದೆ.
ಎಡಗೈ ಬ್ಯಾಟ್ಸ್‌ಮನ್ ಶೀಘ್ರದಲ್ಲೇ ಮರಳಲಿದ್ದಾರೆ ಎಂದು ಫ್ರಾಂಚೈಸಿ ಹೇಳಿದೆ. ಶಿಮ್ರಾನ್ ಹೆಟ್ಮೆಯರ್ ಈ ಋತುವಿನಲ್ಲಿ ಅತ್ಯುತ್ತಮ ಫಾರ್ಮ್‌ನಲ್ಲಿದ್ದು, ತಂಡದ ಬ್ಯಾಟಿಂಗ್ ಆರ್ಡರ್‌ನಲ್ಲಿ ಹೆಚ್ಚು ಅಗತ್ಯವಿರುವ ಶಕ್ತಿ ಒದಗಿಸಿದ್ದಾರೆ. ಐಪಿಎಲ್ 2022ರಲ್ಲಿ ಶಿಮ್ರಾನ್ ಹೆಟ್ಮೆಯರ್ 11 ಪಂದ್ಯಗಳಲ್ಲಿ 72.75 ರ ಸರಾಸರಿಯಲ್ಲಿ 291 ರನ್ ಗಳಿಸುವಲ್ಲಿ ಯಶಸ್ವಿಯಾಗಿದ್ದಾರೆ. ಈ ಋತುವಿನಲ್ಲಿ ಅವರ ಗರಿಷ್ಠ ಸ್ಕೋರ್ ಔಟಾಗದೇ 59 ಆಗಿದೆ.
ಶನಿವಾರ ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧ 190 ರನ್ ಬೆನ್ನಟ್ಟಲು ರಾಜಸ್ಥಾನಕ್ಕೆ ಸಹಾಯ ಮಾಡಲು ಶಿಮ್ರಾನ್ ಹೆಟ್ಮೆಯರ್ ಕೇವಲ 16 ಎಸೆತಗಳಲ್ಲಿ ಅಜೇಯ 31 ರನ್ ಗಳಿಸಿ ಗೆಲುವಿನ ದಡ ಸೇರಿಸಿದ್ದರು.
PublicNext
08/05/2022 12:26 pm