ಮುಂಬೈ: ಹರ್ಷಲ್ ಪಟೇಲ್, ಗ್ಲೇನ್ ಮ್ಯಾಕ್ಸ್‌ವೆಲ್ ಹಾಗೂ ಜೋಶ್ ಹೇಜಲ್ವುಡ್ ಮಿಂಚಿನ ಬೌಲಿಂಗ್ ಪ್ರದರ್ಶನದ ಸಹಾಯದಿಂದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ 13 ರನ್‌ಗಳಿಂದ ಗೆದ್ದು ಬೀಗಿದೆ.
ಪುಣೆ ಸ್ಟೇಡಿಯಂನಲ್ಲಿ ಐಪಿಎಲ್ 2022ರ ಭಾಗವಾಗಿ ಇಂದು ನಡೆದ 49ನೇ ಪಂದ್ಯದಲ್ಲಿ ಟಾಸ್ ಗೆದ್ದ ಚೆನ್ನೈ ತಂಡದ ನಾಯಕ ಎಂ.ಎಸ್.ಧೋನಿ ಬೌಲಿಂಗ್ ಆಯ್ದುಕೊಂಡಿದ್ದರು. ಅದರಂತೆ ಮೊದಲು ಬ್ಯಾಟಿಂಗ್ ಮಾಡಿದ ಆರ್‌ಸಿಬಿ 8 ವಿಕೆಟ್ ನಷ್ಟಕ್ಕೆ 173 ರನ್ ಗಳಿಸಿತ್ತು.
ಬಳಿಕ ಬ್ಯಾಟಿಂಗ್ ಮಾಡಿದ ಚೆನ್ನೈ ತಂಡವು 8 ವಿಕೆಟ್ ನಷ್ಟಕ್ಕೆ 160 ರನ್ ಗಳಿಸಲು ಶಕ್ತವಾಯಿತು. ತಂಡದ ಪರ ಡೆವೊನ್ ಕಾನ್ವೇ 56 ರನ್ ಹಾಗೂ ಮೊಯಿನ್ ಅಲಿ 34 ರನ್ ಗಳಿಸಿದರು. ಉಳಿದಂತೆ ಪ್ರಮುಖ ಆಟಗಾರರಾದ ರಾಬಿನ್ ಉತ್ತಪ್ಪ, ಅಂಬಾಟಿ ರಾಯಿಡು, ರವೀಂದ್ರ ಜಡೇಜಾ ಹಾಗೂ ಎಂ.ಎಸ್, ಧೋನಿ ಬ್ಯಾಟಿಂಗ್ ವೈಫಲ್ಯ ತೋರಿದರು. ಇನ್ನು ಆರ್‌ಸಿಬಿ ಪರ ಹರ್ಷಲ್ ಪಟೇಲ್ 3, ಗ್ಲೇನ್ ಮ್ಯಾಕ್ಸ್‌ವೆಲ್ 2 ಹಾಗೂ ಜೋಶ್ ಹೇಜಲ್ವುಡ್, ವನಿಂದು ಹಸರಂಗ ಡಿ ಸಿಲ್ವ ಹಾಗೂ ಶಹಬಾಜ್ ಅಹ್ಮದ್ ತಲಾ ಒಂದು ವಿಕೆಟ್ ಕಿತ್ತು ತಂಡದ ಗೆಲುವಿಗೆ ಪ್ರಮುಖ ಪಾತ್ರವಹಿಸಿದರು.
ಇದಕ್ಕೂ ಮುನ್ನ ಆರ್‌ಸಿಬಿ ಪರ ಮಹಿಪಾಲ್ ಲೋಮ್ರೋರ್ 42 ರನ್ (27 ಎಸೆತ), ನಾಯಕ ಫಾಫ್ ಡು ಪ್ಲೆಸ್ಸಿಸ್ 38 ರನ್ (22 ಎಸೆತ), ದಿನೇಶ್ ಕಾರ್ತಿಕ್ 26 ರನ್ (17 ಎಸೆತ), ವಿರಾಟ್ ಕೊಹ್ಲಿ 30 ರನ್ (33 ಎಸೆತ) ಹಾಗೂ ರಜತ್ ಪಾಟಿದಾರ್ 21 ರನ್ ಗಳಿಸಿದ್ದರು. ಇನ್ನು ಚೆನ್ನೈ ಪರ ಮಹೇಶ ತೀಕ್ಷಣ 3 ವಿಕೆಟ್, ಮೊಯಿನ್ ಅಲಿ 2 ವಿಕೆಟ್ ಹಾಗೂ ಡ್ವೈನ್ ಪ್ರಿಟೋರಿಯಸ್ 1 ವಿಕೆಟ್ ಪಡೆದಿದ್ದರು.
PublicNext
04/05/2022 11:04 pm