ಕೋಲ್ಕತ್ತಾ: ಕಾಂಗ್ರೆಸ್ ಹಿರಿಯ ನಾಯಕ ಪಿ.ಚಿದಂಬರಂ ಅವರು ಕೋಲ್ಕತ್ತಾ ಹೈಕೋರ್ಟ್ ಆವರಣದಲ್ಲಿ ತಮ್ಮದೇ ಪಕ್ಷದ ಕಾರ್ಯಕರ್ತರು, ವಕೀಲರಿಂದ ಮುಖಭಂಗ ಅನುಭವಿಸಿದ ಘಟನೆ ನಡೆದಿದೆ.
ಹೌದು. ಪಶ್ಚಿಮ ಬಂಗಾಳ ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಅಧೀರ್ ರಂಜನ್ ಚೌಧರಿ ವಿರುದ್ಧದ ಮೆಟ್ರೋ ಡೈರಿ ಪ್ರಕರಣದಲ್ಲಿ ಪಶ್ಚಿಮ ಬಂಗಾಳ ಸರ್ಕಾರವನ್ನು ಪ್ರತಿನಿಧಿಸಲು ಚಿದಂಬರಂ ನ್ಯಾಯಾಲಯಕ್ಕೆ ಬಂದಿದ್ದರು. ಈ ವೇಳೆ ಘಟನೆ ನಡೆದಿದೆ. 'ನೀವು ಮಮತಾ ಬ್ಯಾನರ್ಜಿ ಅವರ ಏಜೆಂಟ್. ಪಶ್ಚಿಮ ಬಂಗಾಳ ಚುನಾವಣೆಯಲ್ಲಿ ನಿಮ್ಮ ಕಳಪೆ ಪ್ರದರ್ಶನದಿಂದಾಗಿಯೇ ಕಾಂಗ್ರೆಸ್ ನೆಲಕಚ್ಚಿತು. ವಾಪಸ್ ಹೋಗಿ' ಎಂದು ಕಾಂಗ್ರೆಸ್ ಕಾರ್ಯಕರ್ತರು, ವಕೀಲರು ಘೋಷಣೆ ಕೂಗಿ ಕಪ್ಪು ಪಟ್ಟಿ ಪ್ರದರ್ಶಿಸಿ ಪ್ರತಿಭಟನೆ ನಡೆಸಿದ್ದಾರೆ.
ಪಶ್ಚಿಮ ಬಂಗಾಳ ಸರ್ಕಾರದ ಮೆಟ್ರೋ ಡೈರಿ ಷೇರುಗಳನ್ನು ಖಾಸಗಿ ಕಂಪನಿಗಳಿಗೆ ಮಾರಾಟ ಮಾಡುವ ನಿರ್ಧಾರದ ವಿರುದ್ಧ ಬಂಗಾಳ ಕಾಂಗ್ರೆಸ್ ಅಧ್ಯಕ್ಷ ಅಧೀರ್ ಚೌಧರಿ ಕೋರ್ಟ್ ಮೆಟ್ಟಿಲೇರಿದ್ದಾರೆ. ಕಾಂಗ್ರೆಸ್ ಹಿರಿಯ ನಾಯಕ ಚಿದಂಬರಂ ಅವರು ತಮ್ಮದೇ ಪಕ್ಷದ ಚೌಧರಿ ವಿರುದ್ಧ ಮಮತಾ ಬ್ಯಾನರ್ಜಿ ಸರ್ಕಾರದ ಪರ ವಾದಿಸುತ್ತಿದ್ದಾರೆ. ಸ್ವತಃ ವಕೀಲರೂ ಆಗಿರುವ ಚಿದಂಬರಂ ಅವರು ಲಾಯರ್ ಕೋಟ್ ಧರಿಸಿ ಕೋಲ್ಕತ್ತಾ ಹೈಕೋರ್ಟ್‌ಗೆ ಆಗಮಿಸಿದ್ದರು. ವಾದ ವಿವಾದ ಬಳಿಕ ಕೋರ್ಟ್‌ನಿಂದ ನಿರ್ಗಮಿಸುವ ವೇಳೆ ಕಾಂಗ್ರೆಸ್ ವಕೀಲರು ಹಾಗೂ ನಾಯಕರು ಚಿದಂಬರಂ ವಿರುದ್ಧ ಪ್ರತಿಭಟನೆ ನಡೆಸಿದ್ದಾರೆ.
PublicNext
04/05/2022 10:54 pm