ಮುಂಬೈ: ಕ್ವಿಂಟನ್ ಡಿ ಕಾಕ್, ದೀಪಕ್ ಹೂಡಾ ಸಮಯೋಚಿತ ಬ್ಯಾಟಿಂಗ್ ಹಾಗೂ ಬೌಲಿಂಗ್ ಪಡೆಯ ಅದ್ಭುತ ಪ್ರದರ್ಶನದಿಂದ ಲಕ್ನೋ ಸೂಪರ್ ಜೈಂಟ್ಸ್ ತಂಡವು ಪಂಜಾಬ್ ಕಿಂಗ್ಸ್ ತಂಡದ ವಿರುದ್ಧ 20 ರನ್‌ಗಳಿಂದ ರೋಚಕ ಗೆಲುವು ಸಾಧಿಸಿದೆ.
ಪುಣೆ ಸ್ಟೇಡಿಯಂನಲ್ಲಿ ಐಪಿಎಲ್ 2022ರ ಭಾಗವಾಗಿ ನಡೆದ 42ನೇ ಪಂದ್ಯದಲ್ಲಿ ಟಾಸ್ ಗೆದ್ದ ಪಂಜಾಬ್ ಕಿಂಗ್ಸ್ ತಂಡದ ನಾಯಕ ಮಯಾಂಕ್ ಅಗರ್ವಾಲ್ ಬೌಲಿಂಗ್ ಆಯ್ದುಕೊಂಡಿದ್ದರು. ಅದರಂತೆ ಮೊದಲು ಬ್ಯಾಟಿಂಗ್ ಮಾಡಿದ ಲಕ್ನೋ ತಂಡವು 8 ವಿಕೆಟ್ ನಷ್ಟಕ್ಕೆ 153 ರನ್ ಗಳಿಸಿತ್ತು.
ಬಳಿಕ ಬ್ಯಾಟಿಂಗ್ ಮಾಡಿದ ಪಂಜಾಬ್ ತಂಡವು 8 ವಿಕೆಟ್ ನಷ್ಟಕ್ಕೆ 133 ರನ್ ಗಳಿಸಿ ಸೋಲು ಒಪ್ಪಿಕೊಂಡಿತು. ತಂಡದ ಪರ ಜಾನಿ ಬೆರಿಸ್ಟೋ 32 ರನ್, ನಾಯಕ ಮಯಾಂಕ್ ಅಗರ್ವಾಲ್ 25 ರನ್, ಹಾಗೂ ರಿಷಿ ಧವನ್ 21 ರನ್ ಗಳಿಸಿದರು.
ಇನ್ನು ಲಕ್ನೋ ಪರ ಮೊಹ್ಸಿನ್ ಖಾನ್ 3 ವಿಕೆಟ್, ದುಷ್ಮಂತ ಚಮೀರ ಹಾಗೂ ಕೃನಾಲ್ ಪಾಂಡ್ಯ 2 ವಿಕೆಟ್ ಉರುಳಿಸಿದರೆ, ರವಿ ಬಿಷ್ಣೋಯ್ 1 ವಿಕೆಟ್ ಪಡೆದು ತಂಡಕ್ಕೆ ಆಸರೆಯಾದರು.
ಇದಕ್ಕೂ ಮುನ್ನ ಲಕ್ನೋ ಪರ ಕ್ವಿಂಟನ್ ಡಿ ಕಾಕ್ 46 ರನ್, ದೀಪಕ್ ಹೂಡಾ 34 ರನ್, ದುಷ್ಮಂತ ಚಮೀರ 17 ರನ್ ಹಾಗೂ ಮೊಹ್ಸಿನ್ ಖಾನ್ 13 ರನ್ ಗಳಿಸಿದ್ದರು. ಉಳಿದಂತೆ ನಾಯಕ ಕೆ.ಎಲ್.ರಾಹುಲ್, ಕೃನಾಲ್ ಪಾಂಡ್ಯ, ಮಾರ್ಕಸ್ ಸ್ಟೊಯಿನಿಸ್ ಹಾಗೂ ಆಯುಷ್ ಬದೋನಿ ಬ್ಯಾಟಿಂಗ್ ವೈಫಲ್ಯ ಎದುರಿಸಿದ್ದರು.
ಇನ್ನು ಪಂಜಾಬ್ ಪರ ಕಗಿಸೋ ರಬಾಡಾ ಪ್ರಮುಖ 4 ವಿಕೆಟ್ ಕಿತ್ತು ಮಿಂಚಿದರೆ, ರಾಹುಲ್ ಚಹಾರ್ 2 ವಿಕೆಟ್ ಹಾಗೂ ಸಂದೀಪ್ ಶರ್ಮಾ 1 ವಿಕೆಟ್ ಉರುಳಿಸಿದ್ದರು.
PublicNext
29/04/2022 11:33 pm