ಮುಂಬೈ: ನಾಯಕ ಕೆ.ಎಲ್.ರಾಹುಲ್ ಏಕಾಂಗಿ ಹೋರಾಟದ ಶತಕ, ಬಳಿಕ ಉತ್ತಮ ಬೌಲಿಂಗ್ ಪ್ರದರ್ಶನದಿಂದ ಲಕ್ನೋ ಸೂಪರ್ ಜೈಂಟ್ಸ್ ತಂಡವು ಮುಂಬೈ ಇಂಡಿಯನ್ಸ್ ವಿರುದ್ಧ 36 ರನ್ಗಳಿಂದ ಗೆದ್ದು ಬೀಗಿದೆ. ಈಮೂಲಕ ಮುಂಬೈ ತಂಡವು ಸತತ 8ನೇ ಸೋಲಿಗೆ ಗುರಿಯಾಗಿದೆ.
ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ಐಪಿಎಲ್ 2022ರ ಭಾಗವಾಗಿ ನಡೆದ 37ನೇ ಪಂದ್ಯದಲ್ಲಿ ಟಾಸ್ ಗೆದ್ದ ಮುಂಬೈ ಇಂಡಿಯನ್ಸ್ ತಂಡದ ನಾಯಕ ರೋಹಿತ್ ಶರ್ಮಾ ಬೌಲಿಂಗ್ ಆಯ್ದುಕೊಂಡಿದ್ದರು. ಅದರಂತೆ ಮೊದಲು ಬ್ಯಾಟಿಂಗ್ ಮಾಡಿದ ಲಕ್ನೋ ತಂಡವು 6 ವಿಕೆಟ್ ನಷ್ಟಕ್ಕೆ 168 ರನ್ ಗಳಿಸಿತ್ತು.
ಬಳಿಕ ಬ್ಯಾಟಿಂಗ್ ಮಾಡಿದ ಮುಂಬೈ ತಂಡವು 8 ವಿಕೆಟ್ ನಷ್ಟಕ್ಕೆ 132 ರನ್ ಗಳಿಸಿ ಸೋಲು ಒಪ್ಪಿಕೊಂಡಿದೆ.
ಮುಂಬೈ ಪರ ನಾಯಕ ರೋಹಿತ್ ಶರ್ಮಾ 39 ರನ್, ತಿಲಕ್ ವರ್ಮಾ 38 ರನ್, ಕೀರನ್ ಪೊಲಾರ್ಡ್ 19 ರನ್ ಗಳಿಸಿದರು.
ಇನ್ನು ಲಕ್ನೋ ಪರ ಕೃನಾಲ್ ಪಾಂಡ್ಯ 3, ಮೊಹ್ಸಿನ್ ಖಾನ್, ಜೇಸನ್ ಹೋಲ್ಡರ್, ರವಿ ಬಿಷ್ಣೋಯ್, ಆಯುಷ್ ಬದೋನಿ ತಲಾ ಒಂದು ವಿಕೆಟ್ ಪಡೆದುಕೊಂಡರು. ಇನ್ನು ದುಷ್ಮಂತ ಚಮೀರ ವಿಕೆಟ್ ಪಡೆಯದೆ ಇದ್ದರೂ ರನ್ ನಿಯಂತ್ರಿಸಿದರು. ಅವರು 4 ಓವರ್ ಬೌಲಿಂಗ್ ಮಾಡಿ ಕೇವಲ 14 ರನ್ ನೀಡಿದರು.
ಇದಕ್ಕೂ ಮುನ್ನ ಲಕ್ನೋ ಪರ ನಾಯಕ ಕೆ.ಎಲ್.ರಾಹುಲ್ ಅಜೇಯ 103 ರನ್ (62 ಎಸೆತಗಳಲ್ಲಿ 12 ಬೌಂಡರಿ, 4 ಸಿಕ್ಸ್) ಸಿಡಿಸಿದ್ದರು. ಇದರೊಂದಿಗೆ ಈ ಬಾರಿಯ ಆವೃತ್ತಿಯಲ್ಲಿ ಕೆ.ಎಲ್.ರಾಹುಲ್ ಎರಡನೇ ಬಾರಿಗೆ ಶತಕ ದಾಖಲಿಸಿದರು. ಇನ್ನುಳಿದಂತೆ ಮನೀಶ್ ಪಾಂಡೆ 22 ರನ್ ಗಳಿಸಿದರೆ, ಕ್ವಿಂಟನ್ ಡಿ ಕಾಕ್ 10 ರನ್, ದೀಪಕ್ ಹೂಡಾ 10 ರನ್, ಆಯುಷ್ ಬಡೋನಿ 14 ರನ್ ಗಳಿಸಿದ್ದರು.
PublicNext
24/04/2022 11:46 pm