ಮುಂಬೈ: ಜೋಸ್ ಬಟ್ಲರ್ ಸ್ಫೋಟಕ ಶತಕ, ನಾಯಕ ಸಂಜು ಸ್ಯಾಮ್ಸನ್ ಅಬ್ಬರದ ಬ್ಯಾಟಿಂಗ್ ಸಹಾಯದಿಂದ ರಾಜಸ್ಥಾನ್ ರಾಯಲ್ಸ್ ತಂಡವು ಕೋಲ್ಕತ್ತಾ ನೈಟ್ ರೈಡರ್ಸ್‌ಗೆ 218 ರನ್‌ಗಳ ಸವಾಲು ನೀಡಿದೆ.
ಐಪಿಎಲ್ 2022ರ ಭಾಗವಾಗಿ ಮುಂಬೈನ ಬ್ರಬೋರ್ನ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ 30ನೇ ಪಂದ್ಯದಲ್ಲಿ ಟಾಸ್ ಗೆದ್ದ ಕೆಕೆಆರ್ ತಂಡದ ನಾಯಕ ಶ್ರೇಯಸ್ ಅಯ್ಯರ್ ಬೌಲಿಂಗ್ ಆಯ್ದುಕೊಂಡರು. ಅದರಂತೆ ಮೊದಲು ಬ್ಯಾಟಿಂಗ್ ಮಾಡಿದ ರಾಜಸ್ಥಾನ್ ತಂಡವು 5 ವಿಕೆಟ್ ನಷ್ಟಕ್ಕೆ 217 ರನ್ ಗಳಿಸಿದೆ.
ರಾಜಸ್ಥಾನ್ ಪರ ಜೋಸ್ ಬಟ್ಲರ್ 103 ರನ್ (61 ಎಸೆತ, 9 ಬೌಂಡರಿ, 5 ಸಿಕ್ಸ್), ಸಂಜು ಸ್ಯಾಮ್ಸನ್ 38 ರನ್ (19 ಎಸೆತ, 3 ಬೌಂಡರಿ, 2 ಸಿಕ್ಸ್), ಶಿಮ್ರಾನ್ ಹೆಟ್ಮೇಯರ್ 13 ಎಸೆತಗಳಲ್ಲಿ 26 ರನ್ ಚಚ್ಚಿದರು.
ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದಲ್ಲಿ ಬಟ್ಲರ್ ಈ ಬಾರಿ ಐಪಿಎಲ್‌ನಲ್ಲಿ ತಮ್ಮ ಮೊದಲ ಶತಕ ದಾಖಲಿಸಿದ್ದರು. ಇದು ಈ ಬಾರಿಯ ಟೂರ್ನಿಯಲ್ಲಿ ದಾಖಲಾದ ಮೊದಲ ಶತಕವಾಗಿತ್ತು. ಈ ಬೆನ್ನಲ್ಲೇ ಲಕ್ನೋ ಸೂಪರ್ ಜೈಂಟ್ಸ್ ನಾಯಕ ಕೆ.ಎಲ್.ರಾಹುಲ್ ಶತಕ ಸಿಡಿಸಿದ್ದರು. ಇದೀಗ ಎರಡನೇ ಬಾರಿಗೆ ಜೋಸ್ ಬಟ್ಲರ್ ಶತಕ ಸಿಡಿಸಿ ಮಿಂಚಿದ್ದಾರೆ.
ಇನ್ನು ಕೆಕೆಆರ್ ಪರ ಸುನಿಲ್ ನರೈನ್ 2 ವಿಕೆಟ್ ಉರುಳಿಸಿದರೆ, ಶಿವಂ ಮಾವಿ, ಪ್ಯಾಟ್ ಕಮ್ಮಿನ್ಸ್ ಹಾಗೂ ಆಂಡ್ರೆ ರಸೆಲ್ ತಲಾ ಒಂದು ವಿಕೆಟ್ ಕಿತ್ತರು.
PublicNext
18/04/2022 09:30 pm