ಮುಂಬೈ: ನಿನ್ನೆ (ಮಂಗಳವಾರ) ನಡೆದ ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧದ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ಭರ್ಜರಿ ಗೆಲುವು ಸಾಧಿಸಿದೆ. ಆದರೆ ಈ ಪಂದ್ಯದಲ್ಲಿ ಹೈದರಾಬಾದ್ ತಂಡದ ನಾಯಕ ಕೇನ್ ವಿಲಿಯಮ್ಸನ್ ಔಟ್ ಭಾರಿ ವಿವಾದಕ್ಕೆ ಕಾರಣವಾಗಿದೆ.
ರಾಜಸ್ಥಾನ್ ರಾಯಲ್ಸ್ ತಂಡ ನೀಡಿದ 211 ರನ್‌ಗಳ ಗುರಿಯನ್ನು ಬೆನ್ನಟ್ಟಿದ ಎಸ್‌ಆರ್‌ಹೆಚ್ ತಂಡದ ಪರವಾಗಿ ಆಂಭಿಕರಾಗಿ ನಾಯಕ ಕೇನ್ ವಿಲಿಯಮ್ಸನ್ ಹಾಗೂ ಅಭಿಶೇಕ್ ಶರ್ಮಾ ಕಣಕ್ಕಿಳಿದಿದ್ದರು. ಈ ವೇಳೆ ಕನ್ನಡಿಗ ಪ್ರಸಿದ್ಧ್ ಕೃಷ್ಣ ಬೌಲಿಂಗ್ ದಾಳಿಗೆ ಇಳಿದಿದ್ದರು. ಈ ಓವರ್‌ನ ನಾಲ್ಕನೇ ಎಸೆತದಲ್ಲಿ ಬಾಲ್ ನಾಯಕ ಕೇನ್ ವಿಲಿಯಮ್ಸನ್ ಬ್ಯಾಟ್‌ಗೆ ಸವರಿಕೊಂಡು ವಿಕೆಟ್ ಕೀಪರ್ ಸಂಜು ಸ್ಯಾಮ್ಸನ್‌ರತ್ತ ಸಾಗಿತ್ತು. ಆದರೆ ಸಂಜು ಸ್ಯಾಮ್ಸನ್ ಕೈಯಿಂದ ಹಾರಿದ ಚೆಂಡನ್ನು ಮೊದಲ ಸ್ಲಿಪ್‌ನಲ್ಲಿದ್ದ ಪಡಿಕ್ಕಲ್ ಡೈವ್ ಮಾಡಿ ಹಿಡಿದಿದ್ದರು.
ಈ ಸಂದರ್ಭದಲ್ಲಿ ಮೈದಾನದಲ್ಲಿದ್ದ ಅಂಪಾಯರ್ ಥರ್ಡ್ ಅಂಪಾಯರ್‌ಗೆ ತೀರ್ಪು ವರ್ಗಾಯಿಸಿದರು. ಬೇರೆ ಬೇರೆ ಕೋನಗಳಿಂದ ಈ ಕ್ಯಾಚ್ ಪಡೆದ ವಿಡಿಯೋ ಪರಿಶೀಲಿಸಿದ ಥರ್ಡ್ ಅಂಪಾಯರ್ ದೇವದತ್ ಪಡಿಕ್ಕಲ್ ಹಿಡಿದ ಕ್ಯಾಚ್‌ಗೆ ಮನ್ನಣೆ ನೀಡಿ ಔಟ್ ಎಂದು ತೀರ್ಪು ನೀಡಿದರು. ಆದರೆ ಕ್ಯಾಮೆರಾಗಳ ದೃಶ್ಯಗಳಲ್ಲಿ ಚೆಂಡು ಮೈದಾನವನ್ನು ಸ್ಪರ್ಶಿಸುವುದು ಸ್ಪಷ್ಟವಾಗಿತ್ತು. ಥರ್ಡ್ ಅಂಪಾಯರ್ ನೀಡಿದ ಈ ತೀರ್ಪಿಗೆ ಸಾಕಷ್ಟು ಕ್ರಿಕೆಟ್ ಪ್ರೇಮಿಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
PublicNext
30/03/2022 08:13 am