ಮುಂಬೈ: ಕಳಪೆ ಬ್ಯಾಟಿಂಗ್‌ನಿಂದ ಬಳಲಿದ ಹೈದರಾಬಾದ್ ತಂಡವು ರಾಜಸ್ಥಾನ ರಾಯಲ್ಸ್ ವಿರುದ್ಧ 61 ರನ್‌ಗಳಿಂದ ಹೀನಾಯ ಸೋಲು ಕಂಡಿದೆ. ಈ ಪಂದ್ಯದಲ್ಲಿ ಕನ್ನಡಿಗರಾದ ಬ್ಯಾಟರ್ ದೇವದತ್ ಪಡಿಕ್ಕಲ್, ಬೌಲರ್ ಪ್ರಸಿದ್ಧ ಕೃಷ್ಣ ಉತ್ತಮ ಪ್ರದರ್ಶನ ನೀಡಿ ಮಿಂಚಿದರು.
ಪುಣೆಯ ಮಹಾರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಐಪಿಎಲ್ 2022ರ 5ನೇ ಪಂದ್ಯದಲ್ಲಿ ಟಾಸ್ ಗೆದ್ದ ಹೈದರಾಬಾದ್ ತಂಡದ ನಾಯಕ ಕೇನ್ ವಿಲಿಯಮ್ಸನ್ ಬೌಲಿಂಗ್ ಆಯ್ದುಕೊಂಡ್ಡಿರು. ಅದರಂತೆ ಮೊದಲು ಬ್ಯಾಟಿಂಗ್ ಮಾಡಿದ ರಾಜಸ್ಥಾನ್ ತಂಡವು 6 ವಿಕೆಟ್ ನಷ್ಟಕ್ಕೆ 210 ರನ್ ಗಳಿಸಿತ್ತು. ಬಳಿಕ ಬ್ಯಾಟಿಂಗ್ ಮಾಡಿದ ಹೈದರಾಬಾದ್ ತಂಡವು 7 ವಿಕೆಟ್ ನಷ್ಟಕ್ಕೆ 149 ರನ್ ಗಳಿಸಲು ಶಕ್ತವಾಯಿತು.
ಐಡೆನ್ ಮಾರ್ಕ್ರಾಮ್ 57 ರನ್, ವಾಷಿಂಗ್ಟನ್ ಸುಂದರ್ 40 ರನ್ (14 ಎಸೆತ), ರೊಮಾರಿಯೋ ಶೆಫರ್ಡ್ 24 ರನ್ ಗಳಿಸಿದರು. ಉಳಿದಂತೆ ಹೈದರಾಬಾದ್ ಪರ ನಾಯಕ ಕೇನ್ ವಿಲಿಯಮ್ಸನ್ 2 ರನ್, ಅಭಿಷೇಕ್ ಶರ್ಮಾ 9 ರನ್, ನಿಕೋಲಸ್ ಪೂರನ್ 0 ರನ್, ರಾಹುಲ್ ತ್ರಿಪಾಠಿ 0 ರನ್ , ಅಬ್ದುಲ್ ಸಮದ್ 4 ರನ್‌ಗೆ ವಿಕೆಟ್ ಒಪ್ಪಿಸಿ ತಂಡದ ಹೀನಾಯ ಸೋಲಿಗೆ ಕಾರಣರಾದರು.
ಇನ್ನು ರಾಜಸ್ಥಾನ್ ತಂಡದಲ್ಲಿರುವ ಕನ್ನಡಿಗ ಪ್ರಸಿದ್ಧ್ ಕೃಷ್ಣ 4 ಓವರ್ ಬೌಲಿಂಗ್ ಮಾಡಿ ಒಂದು ಮೆಡನ್ ಓವರ್ ಮಾಡಿ ಮಿಂಚಿದರು. ಅಷ್ಟೇ ಅಲ್ಲದೆ ಪ್ರಮುಖ 2 ವಿಕೆಟ್ ಉರುಳಿಸಿ ಕೇವಲ 16 ರನ್ ನೀಡಿದರು. ಇನ್ನು ಯಜುವೇಂದ್ರ ಚಹಾಲ್ 3 ವಿಕೆಟ್ ಪಡೆದರೆ, ಟ್ರೆಂಟ್ ಬೌಲ್ಟ್ 2 ವಿಕೆಟ್ ಕಿತ್ತು ಮಿಂಚಿದರು.
ಇದಕ್ಕೂ ಮುನ್ನ ರಾಜಸ್ಥಾನ್ ಪರ ನಾಯಕ ಸಂಜು ಸ್ಯಾಮ್ಸನ್ 55 ರನ್, ದೇವದತ್ ಪಡಿಕ್ಕಲ್ 41 ರನ್, ಜೋಸ್ ಬಟ್ಲರ್ 35 ರನ್, ಯಶಸ್ವಿ ಜೈಸ್ವಾಲ್ 20 ರನ್, ಶಿಮ್ರಾನ್ ಹೆಟ್ಮೆಯರ್ 33 ರನ್ ಹಾಗೂ ರಿಯಾನ್ ಪರಾಗ್ 12 ರನ್ ಗಳಿಸಿದ್ದರು.
PublicNext
29/03/2022 11:15 pm