ಮುಂಬೈ: ಕೊನೆಯಲ್ಲಿ ಲಲಿತ್ ಯಾದವ್ ಹಾಗೂ ಅಕ್ಸರ್ ಪಟೇಲ್ ಸ್ಫೋಟಕ ಬ್ಯಾಟಿಂಗ್ ಸಹಾಯದಿಂದ ಡೆಲ್ಲಿ ಕ್ಯಾಪಿಟಲ್ಸ್ ತಂಡವು ಮುಂಬೈ ಇಂಡಿಯನ್ಸ್ ವಿರುದ್ಧ 4 ವಿಕೆಟ್‌ಗಳಿಂದ ರೋಚಕ ಗೆಲುವು ಸಾಧಿಸಿದೆ.
ಮುಂಬೈನ ಬ್ರಬೋರ್ನ್ ಕ್ರಿಕೆಟ್ ಕ್ಲಬ್ ಆಫ್ ಇಂಡಿಯಾ ಮೈದಾನದಲ್ಲಿ ಇಂದು ನಡೆದ ಐಪಿಎಲ್ 2022ರ ಟೂರ್ನಿಯ ಎರಡನೇ ಪಂದ್ಯದಲ್ಲಿ ಟಾಸ್ ಗೆದ್ದ ಡೆಲ್ಲಿ ತಂಡದ ನಾಯಕ ರಿಷಭ್ ಪಂತ್ ಬೌಲಿಂಗ್ ಆಯ್ದುಕೊಂಡರು. ಅದರಂತೆ ಮೊದಲು ಬ್ಯಾಟಿಂಗ್ ಮಾಡಿದ ಮುಂಬೈ ತಂಡವು 5 ವಿಕೆಟ್ ನಷ್ಟಕ್ಕೆ 177 ರನ್ ಬಾರಿಸಿತ್ತು. ಬಳಿಕ ಬ್ಯಾಟಿಂಗ್ ಮಾಡಿದ ಡೆಲ್ಲಿ ತಂಡವು 10 ಎಸೆತಗಳು ಬಾಕಿ ಇರುವಂತೆ 6 ವಿಕೆಟ್ ನಷ್ಟಕ್ಕೆ 179 ರನ್ ಗಳಿಸಿ ಗೆದ್ದು ಬೀಗಿದೆ.
104 ರನ್ ಗಳಿಗೆ ಪ್ರಮುಖ 6 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ್ದ ಡೆಲ್ಲಿ ತಂಡಕ್ಕೆ ಲಲಿತ್ ಯಾದವ್ (ಅಜೇಯ 48 ರನ್) ಹಾಗೂ ಅಕ್ಸರ್ ಪಟೇಲ್ (38 ರನ್) ಜೋಡಿ ಗೆಲುವಿನ ನಿರೀಕ್ಷೆ ಮೂಡಿಸಿತು. ಈ ಜೋಡಿಯು 30 ಎಸೆತಗಳಲ್ಲಿ 75 ಚಚ್ಚಿ ತಂಡಕ್ಕೆ ಗೆಲುವು ತಂದುಕೊಟ್ಟಿತು.
ಇದಕ್ಕೂ ಮುನ್ನ ಮುಂಬೈ ಇಂಡಿಯನ್ಸ್ ಪರ ಆರಂಭಿಕ ಬ್ಯಾಟರ್ ಇಶಾನ್ ಕಿಶನ್ 48 ಎಸೆತಗಳಲ್ಲಿ ಅಜೇಯ 81 ರನ್ (11 ಬೌಂಡರಿ, 2 ಸಿಕ್ಸ್,) ಬಾರಿಸಿದರು. ಉಳಿದಂತೆ ನಾಯಕ ರೋಹಿತ್ ಶರ್ಮಾ 41 ರನ್, ಅನ್‌ಮೋಲ್‌ಪ್ರೀತ್ ಸಿಂಗ್ 22 ರನ್ ಗಳಿಸಿದ್ದರು. ಇನ್ನು ಡೆಲ್ಲಿ ಪರ ಕುಲದೀಪ್ ಯಾದವ್ ಉತ್ತಮ ಬೌಲಿಂಗ್ ಪ್ರದರ್ಶನ ನೀಡಿದ್ದರು. ಅವರು 4 ಓವರ್ ಬೌಲಿಂಗ್ ಮಾಡಿ, 18 ರನ್ ನೀಡಿ ಪ್ರಮುಖ 3 ವಿಕೆಟ್ ಕಿತ್ತರು. ಖಲೀಲ್ ಅಹಮದ್ ಕೂಡ 2 ವಿಕೆಟ್ ಪಡೆದು ತಂಡಕ್ಕೆ ಆಸರೆಯಾಗಿದ್ದರು.
PublicNext
27/03/2022 07:27 pm