ದುಬೈ: ಟೀಂ ಇಂಡಿಯಾದ ಅನುಭವಿ ವೇಗದ ಬೌಲರ್ ಜಸ್ಪ್ರೀತ್ ಬುಮ್ರಾ ಐಸಿಸಿ ಟೆಸ್ಟ್ ಶ್ರೇಯಾಂಕದಲ್ಲಿ 6 ಸ್ಥಾನ ಬಡ್ತಿ ಪಡೆದು ಅಗ್ರ 5ರೊಳಗೆ ಪ್ರವೇಶಿಸಿದ್ದಾರೆ.
ಬುಮ್ರಾ ಶ್ರೀಲಂಕಾ ವಿರುದ್ಧದ ಟೆಸ್ಟ್ ಸರಣಿಯಲ್ಲಿ 5 ವಿಕೆಟ್ ಗೊಂಚಲು ಸೇರಿದಂತೆ ಸರಣಿಯಲ್ಲಿ 8 ವಿಕೆಟ್ ಪಡೆದಿದ್ದರು. ಈ ಪ್ರದರ್ಶನದ ನೆರವಿನಿಂದ ಅವರು 4ನೇ ಶ್ರೇಯಾಂಕ ಪಡೆದುಕೊಂಡಿದ್ದಾರೆ. ಪ್ಯಾಟ್ ಕಮಿನ್ಸ್(892) ಅಗ್ರಸ್ಥಾನದಲ್ಲಿದ್ದರೆ, ರವಿಚಂದ್ರನ್ ಅಶ್ವಿನ್(850) ಹಾಗೂ ಕಗಿಸೊ ರಬಾಡ(835) ಕ್ರಮವಾಗಿ ಎರಡು ಮತ್ತು ಮೂರನೇ ಸ್ಥಾನದಲ್ಲಿದ್ದಾರೆ.
ಇನ್ನು ಲಂಕಾ ಸರಣಿಯಲ್ಲಿ ಬ್ಯಾಟಿಂಗ್ ವೈಫಲ್ಯ ತೋರಿದ ವಿರಾಟ್ ಕೊಹ್ಲಿ (742) ಬ್ಯಾಟಿಂಗ್ ಶ್ರೇಯಾಂಕದಲ್ಲಿ 4 ಸ್ಥಾನ ಕುಸಿದು 9ಕ್ಕೆ ಜಾರಿದ್ದಾರೆ. ರೋಹಿತ್ ಶರ್ಮಾ 6ನೇ ಮತ್ತು ರಿಷಭ್ ಪಂತ್ 10ನೇ ಸ್ಥಾನ ಉಳಿಸಿಕೊಂಡಿದ್ದಾರೆ. ಮಾರ್ನಸ್ ಲ್ಯಾಬುಶೇನ್(936), ಜೋ ರೂಟ್(872), ಸ್ಟೀವ್ ಸ್ಮಿತ್(851), ಕೇನ್ ವಿಲಿಯಮ್ಸನ್(844) ಮತ್ತು ದಿಮುತ್ ಕರುಣರತ್ನೆ(781) ಅಗ್ರ 5ರಲ್ಲಿದ್ದಾರೆ.
ಆಲ್ರೌಂಡರ್ ಶ್ರೇಯಾಂಕದಲ್ಲಿ ಕಳೆದ ವಾರ ಅಗ್ರಸ್ಥಾನಕ್ಕೇರಿದ್ದ ರವೀಂದ್ರ ಜಡೇಜಾ ಮತ್ತೆ 2ನೇ ಸ್ಥಾನಕ್ಕೆ ಕುಸಿತ ಕಂಡಿದ್ದಾರೆ. ವೆಸ್ಟ್ ಇಂಡೀಸ್ ಆಲ್ರೌಂಡರ್ ಜೇಸನ್ ಹೋಲ್ಡರ್(393) ಅಗ್ರಸ್ಥಾನಕ್ಕೆ ಮರಳಿದ್ದಾರೆ. ಅಶ್ವಿನ್(341) 3ನೇ ಸ್ಥಾನದಲ್ಲಿದ್ದಾರೆ.
PublicNext
16/03/2022 04:34 pm