ಹ್ಯಾಮಿಲ್ಟನ್: ಉತ್ತಮ ಬೌಲಿಂಗ್, ಬ್ಯಾಟಿಂಗ್ ಪ್ರದರ್ಶನದಿಂದ ನ್ಯೂಜಿಲೆಂಡ್ ಮಹಿಳೆಯರ ತಂಡವು ಭಾರತದ ವನಿತೆಯರ ತಂಡದ ವಿರುದ್ಧ 62 ರನ್‌ಗಳಿಂದ ಗೆಲುವು ಸಾಧಿಸಿದೆ.
ಐಸಿಸಿ ಮಹಿಳಾ ಏಕದಿನ ವಿಶ್ವಕಪ್ ಟೂರ್ನಿಯ ಭಾಗವಾಗಿ ಹ್ಯಾಮಿಲ್ಟನ್ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಇಂದಿನ ಪಂದ್ಯದಲ್ಲಿ ಟಾಸ್ ಗೆದ್ದ ಭಾರತ ತಂಡದ ನಾಯಕಿ ಮಿಥಾಲಿ ರಾಜ್ ಅವರು ಬೌಲಿಂಗ್ ಆಯ್ದುಕೊಂಡಿದ್ದರು. ಅದರಂತೆ ಮೊದಲು ಬ್ಯಾಟಿಂಗ್ ಮಾಡಿದ ಕಿವೀಸ್ ತಂಡವು ನಿಗದಿತ 50 ಓವರ್‌ಗಳಲ್ಲಿ 9 ವಿಕೆಟ್ ನಷ್ಟಕ್ಕೆ 260 ರನ್ ಗಳಿಸಿತ್ತು.
261 ರನ್‌ಗಳ ಟಾರ್ಗೆಟ್ ಬೆನ್ನಟ್ಟಿದ ಭಾರತ ಆರಂಭದಲ್ಲೇ ಆಘಾತ ಎದುರಿಸಿತು. ಪರಿಣಾಮ 46.4 ಓವರ್‌ಗಳಲ್ಲಿ ಭಾರತವು ಎಲ್ಲಾ 10 ವಿಕೆಟ್ ಕಳೆದುಕೊಂಡು 198 ರನ್ ಗಳಿಸಲು ಮಾತ್ರ ಶಕ್ತವಾಯಿತು. ತಂಡದ ಗೆಲುವಿಗಾಗಿ ಹರ್ಮನ್‌ಪ್ರೀತ್ ಕೌರ್ ಅವರ ಏಕಾಂಗಿ ಹೋರಾಟ ನಡೆಸಿದರು. ಅವರು 63 ಎಸೆತಗಳಲ್ಲಿ 71 ರನ್ (6 ಬೌಂಡರಿ, 2 ಸಿಕ್ಸ್) ಸಿಡಿದರು. ಈ ಮೂಲಕ ಸೋಲಿನ ಅಂತರವನ್ನು ತಗ್ಗಿಸಿದರು.
ಇದಕ್ಕೂ ಮುನ್ನ ನ್ಯೂಜಿಲೆಂಡ್ ಪರ ಅಮೆಲಿಯಾ ಕೆರ್ 50 ರನ್, ಆಮಿ ಸ್ಯಾಟರ್ಥ್‌ವೈಟ್ 75 ರನ್, ಕೇಟಿ ಮಾರ್ಟಿನ್ 41 ರನ್ ಹಾಗೂ ನಾಯಕಿ ಸೋಫಿ ಡಿವೈನ್ 35 ರನ್ ಗಳಿಸಿದ್ದರು. ಇನ್ನು ಭಾರತದ ಪರ ಪೂಜಾ ವಸ್ತ್ರಕರ್ 4 ವಿಕೆಟ್ ಕಿತ್ತು ಮಿಂಚಿದರೆ, ರಾಜೇಶ್ವರಿ ಗಾಯಕವಾಡ 2 ವಿಕೆಟ್, ದೀಪ್ತಿ ಶರ್ಮಾ ಹಾಗೂ ಜೂಲನ್ ಗೋಸ್ವಾಮಿ ತಲಾ ಒಂದು ವಿಕೆಟ್ ಪಡೆದಿದ್ದರು.
PublicNext
10/03/2022 03:49 pm