ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಟೆಸ್ಟ್​ ರ‍್ಯಾಂಕಿಂಗ್​: ಜಡೇಜಾ ನಂ.1 ಆಲ್​ರೌಂಡರ್- ವಿರಾಟ್‌ಗೆ ಭಡ್ತಿ, ರೋಹಿತ್‌ಗೆ ಹಿನ್ನಡೆ

ದುಬೈ: ಐಸಿಸಿ ನೂತನ ಟೆಸ್ಟ್ ಶ್ರೇಯಾಂಕ ಪಟ್ಟಿ ಬಿಡುಗಡೆಯಾಗಿದ್ದು, ಟೆಸ್ಟ್​ ಆಲ್​ರೌಂಡರ್​ಗಳ ಪಟ್ಟಿಯಲ್ಲಿ ಟೀಂ ಇಂಡಿಯಾದ ರವೀಂದ್ರ ಜಡೇಜಾ ಅಗ್ರಸ್ಥಾನ ಪಡೆದಿದ್ದಾರೆ.

ಮೊಹಾಲಿಯಲ್ಲಿ ನಡೆದ ಶ್ರೀಲಂಕಾ ವಿರುದ್ಧದ ಮೊದಲ ಟೆಸ್ಟ್​ ಪಂದ್ಯದಲ್ಲಿ ರವೀಂದ್ರ ಜಡೇಜಾ ಬ್ಯಾಟಿಂಗ್​, ಬೌಲಿಂಗ್​ನಲ್ಲಿ ಪಾರಮ್ಯ ಮೆರೆದಿದ್ದರು. ಬ್ಯಾಟಿಂಗ್​ನಲ್ಲಿ ಅಜೇಯ 175 ರನ್​ ಗಳಿಸಿದ್ದಲ್ಲದೇ, 9 ವಿಕೆಟ್​ ಪಡೆದು ಸರ್ವಶ್ರೇಷ್ಟ ಆಟವಾಡಿದ್ದರು. ಇದರಿಂದ 406 ಅಂಕ ಗಳಿಸಿ ನಂ.1 ಆಲ್​ರೌಂಡರ್​ ಸ್ಥಾನವನ್ನು ತಮ್ಮದಾಗಿಸಿಕೊಂಡಿದ್ದಾರೆ. ಈ ಮೂಲಕ ಜಡೇಜಾ ಎರಡನೇ ಬಾರಿಗೆ ನಂ.1 ಆಲ್​ರೌಂಡರ್​ ಸ್ಥಾನಕ್ಕೆ ಲಗ್ಗೆ ಇಟ್ಟಿದ್ದಾರೆ.

ಈ ಮೊದಲು ನಂ.1 ಸ್ಥಾನದಲ್ಲಿದ್ದ ವೆಸ್ಟ್​​ ಇಂಡೀಸ್​ನ ಜೇಸನ್​ ಹೋಲ್ಡರ್​ 2ನೇ ಸ್ಥಾನಕ್ಕೆ ಕುಸಿದಿದ್ದಾರೆ. ಇನ್ನು 2ನೇ ಸ್ಥಾನದಲ್ಲಿದ್ದ ಆರ್​. ಅಶ್ವಿನ್​ ಒಂದು ಸ್ಥಾನ ಕುಸಿದು 3ನೇ ಸ್ಥಾನಕ್ಕೆ ಜಾರಿದ್ದಾರೆ. ಬಾಂಗ್ಲಾದೇಶದ ಶಕೀಬ್​ ಅಲ್​ ಹಸನ್​ (4), ಇಂಗ್ಲೆಂಡ್​ನ ಬೆನ್​ ಸ್ಟೋಕ್ಸ್​(5) ನಂತರದ ಸ್ಥಾನದಲ್ಲಿದ್ದಾರೆ.

ಇನ್ನು ಟೆಸ್ಟ್​ ಬ್ಯಾಟಿಂಗ್​ ಪಟ್ಟಿಯಲ್ಲಿ​ ವಿರಾಟ್​ ಕೊಹ್ಲಿ 2 ಸ್ಥಾನಗಳ ಏರಿಕೆ ಕಂಡು 5ನೇ ಸ್ಥಾನಕ್ಕೆ ಜಿಗಿದಿದ್ದಾರೆ. ಇದೇ ವೇಳೆ ಟೆಸ್ಟ್​ ತಂಡದ ನೂತನ ನಾಯಕ ರೋಹಿತ್​ ಶರ್ಮಾ 1 ಸ್ಥಾನ ಕುಸಿದು 6ನೇ ಸ್ಥಾನದಲ್ಲಿದ್ದಾರೆ. ಇದೇ ಮೊದಲ ಬಾರಿಗೆ ವಿಕೆಟ್​ ಕೀಪರ್​ ರಿಷಬ್​ ಪಂತ್​ ಟಾಪ್ 10ರೊಳಗೆ ಎಂಟ್ರಿ ಕೊಟ್ಟಿದ್ದಾರೆ. ಪಟ್ಟಿಯಲ್ಲಿ ಆಸ್ಟ್ರೇಲಿಯಾದ ಮಾರ್ನಸ್​ ಲಬುಶೇನ್​ ನಂ.1 ಸ್ಥಾನವನ್ನು ಕಾಯ್ದುಕೊಂಡಿದ್ದಾರೆ.

ಟೆಸ್ಟ್​ ಬೌಲಿಂಗ್ ರ‍್ಯಾಂಕಿಂಗ್​ನಲ್ಲಿ ಯಾವುದೇ ಮಹತ್ತರ ಬದಲಾವಣೆಯಾಗಿಲ್ಲ. ಅಗ್ರ 10 ಆಟಗಾರರಲ್ಲಿ ಆರ್​. ಅಶ್ವಿನ್​ 2ನೇ ಸ್ಥಾನ ಕಾಯ್ದುಕೊಂಡರೆ, ಜಸ್‌ಪ್ರೀತ್ ಬುಮ್ರಾ 10ನೇ ಸ್ಥಾನದಲ್ಲಿ ಸ್ಥಿರವಾಗಿದ್ದಾರೆ. ಪಟ್ಟಿಯಲ್ಲಿ ಆಸ್ಟ್ರೇಲಿಯಾದ ಪ್ಯಾಟ್​ ಕಮಿನ್ಸ್​ ನಂ.1 ಸ್ಥಾನದಲ್ಲಿ ವಿರಾಜಮಾನರಾಗಿದ್ದಾರೆ.

Edited By : Vijay Kumar
PublicNext

PublicNext

09/03/2022 04:27 pm

Cinque Terre

44.59 K

Cinque Terre

0