ಚೆನ್ನೈ: ಪಡಿಕ್ಕಲ್ ಅದ್ಭುತ ಬ್ಯಾಟಿಂಗ್ ಪ್ರದರ್ಶನ ಹಾಗೂ ಕೃಷ್ಣಪ್ಪ ಗೌತಮ್ ಉತ್ತಮ ಬೌಲಿಂಗ್ ಪ್ರದರ್ಶನದ ಸಹಾಯದಿಂದ ಕರ್ನಾಟಕ ತಂಡವು ಪುದುಚೆರಿ ವಿರುದ್ಧ 20 ರನ್‌ಗಳಿಂದ ಗೆಲುವು ಸಾಧಿಸಿದೆ.
ಚೆನ್ನೈನ ಶ್ರೀ ಶಿವ ಸುಬ್ರಹ್ಮಣ್ಯಸ್ವಾಮಿ ನಾಡಾರ್ ಇಂಜಿನಿಯರಿಂಗ್ ಕಾಲೇಜು ಕ್ರೀಡಾಂಗಣದಲ್ಲಿ ರಣಜಿ ಟ್ರೋಫಿ ಭಾಗವಾಗಿ ಪುದುಚೇರಿ ತಂಡದ ವಿರುದ್ಧದ ಪಂದ್ಯದಲ್ಲಿ ಕರ್ನಾಟಕ ರೋಚಕ ಗೆಲುವು ದಾಖಲಿಸಿದೆ. ಮನೀಷ್ ಪಾಂಡೆ ನಾಯಕತ್ವದ ಕರ್ನಾಟಕ ತಂಡ ಲೀಗ್ ಹಂತದ ತನ್ನ ಮೊದಲನೇ ಪಂದ್ಯದಲ್ಲಿ ರೈಲ್ವೇಸ್ ವಿರುದ್ಧ ಡ್ರಾ ಮಾಡಿಕೊಂಡಿತ್ತು ಹಾಗೂ ನಂತರ ನಡೆದ ದ್ವಿತೀಯ ಪಂದ್ಯದಲ್ಲಿ ಜಮ್ಮು ಕಾಶ್ಮೀರದ ವಿರುದ್ಧ ಜಯವನ್ನು ಸಾಧಿಸಿತ್ತು. ಈ ಮೂಲಕ ಕರ್ನಾಟಕ 3 ಪಂದ್ಯಗಳಿಂದ ಒಟ್ಟು 16 ಅಂಕ ಗಳಿಸಿ ಕ್ವಾರ್ಟರ್ ಫೈನಲ್‌ಗೆ ಲಗ್ಗೆ ಇಟ್ಟಿದೆ.
ಕ್ವಾರ್ಟರ್ ಫೈನಲ್ ಪ್ರವೇಶಿಸಿದ ಉಳಿದ ತಂಡಗಳೆಂದರೆ ಮಧ್ಯಪ್ರದೇಶ, ಬಂಗಾಲ, ಮುಂಬೈ, ಉತ್ತರಾಖಂಡ, ಪಂಜಾಬ್ ಮತ್ತು ಉತ್ತರಪ್ರದೇಶ. ಉಳಿದಂತೆ ಜಾರ್ಖಂಡ್ ಮತ್ತು ನಾಗಾಲ್ಯಾಂಡ್ ಪ್ರೀ-ಕ್ವಾರ್ಟರ್ ಫೈನಲ್‌ನಲ್ಲಿ ಸೆಣಸಲಿವೆ.
ಈ ಪಂದ್ಯದಲ್ಲಿ ಟಾಸ್ ಗೆದ್ದ ಪುದುಚೆರಿ ಬೌಲಿಂಗ್ ಆಯ್ಕೆ ಮಾಡಿಕೊಂಡು ಕರ್ನಾಟಕ ತಂಡಕ್ಕೆ ಮೊದಲು ಬ್ಯಾಟಿಂಗ್ ಮಾಡಲು ಅವಕಾಶವನ್ನು ನೀಡಿತ್ತು. ಅದರಂತೆ ತನ್ನ ಮೊದಲನೇ ಇನ್ನಿಂಗ್ಸ್ ಬ್ಯಾಟಿಂಗ್ ಮಾಡಿದ ಕರ್ನಾಟಕ 8 ವಿಕೆಟ್ ನಷ್ಟಕ್ಕೆ 453 ರನ್ ಗಳಿಸಿ ಡಿಕ್ಲೇರ್ ಮಾಡಿಕೊಂಡಿತ್ತು.
ಇನ್ನು ತನ್ನ ಮೊದಲನೇ ಇನ್ನಿಂಗ್ಸ್ ಬ್ಯಾಟಿಂಗ್ ಆರಂಭಿಸಿದ ಪುದುಚೆರಿ ೨೪೧ ರನ್‌ಗಳಿಗೆ ಆಲ್ಔಟ್ ಆಯಿತು.
ಕರ್ನಾಟಕ ಮತ್ತು ಪುದುಚೆರಿ ತಂಡಗಳ ನಡುವಿನ ಮೊದಲ ಇನ್ನಿಂಗ್ಸ್‌ನಲ್ಲಿ ಕಡಿಮೆ ಮೊತ್ತ ಕಲೆಹಾಕಿ 212 ರನ್‌ಗಳ ಹಿನ್ನಡೆಯನ್ನು ಅನುಭವಿಸಿ ಫಾಲೋಆನ್ ನಿಯಮಕ್ಕೆ ಒಳಗಾದ ಪುದುಚೆರಿ ಎರಡನೇ ಇನ್ನಿಂಗ್ಸ್‌ನಲ್ಲಿ ಮತ್ತೊಮ್ಮೆ ಆಲ್ಔಟ್ ಆಗಿದೆ. ಹೌದು, ಪಂದ್ಯದ ಕೊನೆಯ ದಿನದಲ್ಲಿ (ಮಾರ್ಚ್ 6 ) ಇನ್ನೂ 156 ನಿಮಿಷಗಳು ಬಾಕಿ ಇರುವಾಗಲೇ ಪುದುಚೆರಿ ತಂಡವನ್ನು 192 ರನ್‌ಗಳಿಗೆ ಕಟ್ಟಿಹಾಕಿದ ಕರ್ನಾಟಕ ಇನ್ನಿಂಗ್ಸ್ ಸಹಿತ 20 ರನ್‌ಗಳ ಜಯ ಸಾಧಿಸಿದೆ.
ಪಂದ್ಯದ ಮೊದಲ ಇನ್ನಿಂಗ್ಸ್‌ನಲ್ಲಿ 309 ಎಸೆತಗಳನ್ನು ಎದುರಿಸಿ 178 ರನ್ ಗಳಿಸಿ ಕರ್ನಾಟಕ ಬೃಹತ್ ಮೊತ್ತ ಕಲೆಹಾಕುವಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ ದೇವದತ್ ಪಡಿಕ್ಕಲ್ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಇನ್ನು ಪುದುಚೆರಿಯ ಮೊದಲ ಇನ್ನಿಂಗ್ಸ್‌ನಲ್ಲಿ ಕರ್ನಾಟಕದ ಪರ ಕೃಷ್ಣಪ್ಪ ಗೌತಮ್ 5 ವಿಕೆಟ್ ಗಳಿಸಿದರೆ, ಪ್ರಸಿದ್ಧ್ ಕೃಷ್ಣ ಮತ್ತು ವಿದ್ಯಾಧರ್ ಪಾಟೀಲ್ ತಲಾ ಎರಡು ವಿಕೆಟ್ ಪಡೆದರು ಹಾಗೂ ವಿ ಕಾವೇರಪ್ಪ ಒಂದು ವಿಕೆಟ್ ಪಡೆದರು.
PublicNext
07/03/2022 09:39 am