ಮೊಹಾಲಿ: ಶ್ರೀಲಂಕಾ ವಿರುದ್ಧ ಕ್ಲೀನ್ ಸ್ವೀಪ್ ಮೂಲಕ ಟಿ20 ಸರಣಿ ಗೆದ್ದು ಬೀಗಿದ ಟೀಂ ಇಂಡಿಯಾ ಟೆಸ್ಟ್ ಸರಣಿಗೆ ಭರ್ಜರಿ ತಯಾರಿ ನಡೆಸಿದೆ. ಇನ್ನ ಶ್ರೀಲಂಕಾ ವಿರುದ್ಧ ಮೊಹಾಲಿ ಕ್ರಿಕೆಟ್ ಕ್ರೀಡಾಂಗಣದಲ್ಲಿ ಮಾರ್ಚ್ 4ರಂದು ಆರಂಭವಾಗಲಿರುವ ಟೆಸ್ಟ್ ಸರಣಿಯಲ್ಲಿ ವಿರಾಟ್ ಕೊಹ್ಲಿ ಕಣಕ್ಕಿಳಿಯಲು ಸಜ್ಜಾಗುತ್ತಿದ್ದಾರೆ. ಶ್ರೀಲಂಕಾ ವಿರುದ್ಧ ನಡೆಯಲಿರುವ ಪ್ರಥಮ ಟೆಸ್ಟ್ ಪಂದ್ಯದ ಮೂಲಕ ವಾಪಸ್ ಟೀಮ್ ಇಂಡಿಯಾ ಸೇರಲಿರುವ ವಿರಾಟ್ ಕೊಹ್ಲಿಗೆ ಈ ಪಂದ್ಯ ಮೈಲಿಗಲ್ಲಾಗಿದೆ.
ಶ್ರೀಲಂಕಾ ವಿರುದ್ಧ ನಡೆಯಲಿರುವ ಈ ಮೊಹಾಲಿ ಟೆಸ್ಟ್ ಪಂದ್ಯ ವಿರಾಟ್ ಕೊಹ್ಲಿ ಆಡಲಿರುವ ನೂರನೇ ಟೆಸ್ಟ್ ಪಂದ್ಯವಾಗಿದೆ. ಈ ಕಾರಣದಿಂದಾಗಿ ಈ ಪಂದ್ಯ ಸಾಕಷ್ಟು ಮಹತ್ವ ಹಾಗೂ ವಿಶೇಷತೆಯನ್ನು ಹೊಂದಿದ್ದು, ದಿನದಿಂದ ದಿನಕ್ಕೆ ಈ ಪಂದ್ಯದ ವಿಷಯವಾಗಿ ಕ್ರೇಜ್ ಹೆಚ್ಚಾಗುತ್ತಿದೆ. ಇನ್ನು ಶ್ರೀಲಂಕಾ ವಿರುದ್ಧದ ಟಿ20 ಸರಣಿಯಿಂದ ವಿಶ್ರಾಂತಿಗೆಂದು ಹೊರಗುಳಿದಿದ್ದ ವಿರಾಟ್ ಕೊಹ್ಲಿ ಈಗಾಗಲೇ ಮೊಹಾಲಿ ಕ್ರೀಡಾಂಗಣವನ್ನು ತಲುಪಿದ್ದು, ತಮ್ಮ ನೂರನೇ ಟೆಸ್ಟ್ ಪಂದ್ಯಕ್ಕಾಗಿ ನೆಟ್ ಅಭ್ಯಾಸವನ್ನು ಆರಂಭಿಸಿದ್ದಾರೆ. ಅತ್ತ ರೋಹಿತ್ ಶರ್ಮಾ ಮತ್ತು ಭಾರತ ತಂಡದ ಇತರೆ ಆಟಗಾರರು ಇಂದು (ಫೆಬ್ರವರಿ 28 ) ಮೊಹಾಲಿ ತಲುಪಿದ್ದು ಮಂಗಳವಾರದಿಂದ ಅಭ್ಯಾಸಕ್ಕಾಗಿ ಮೈದಾನಕ್ಕಿಳಿಯಲಿದ್ದಾರೆ.
PublicNext
28/02/2022 11:02 pm