ಲಕ್ನೋ: ವೆಸ್ಟ್ ಇಂಡೀಸ್ ವಿರುದ್ಧದ ಏಕದಿನ ಹಾಗೂ ಟಿ20 ಸರಣಿಯಲ್ಲಿ ವೈಟ್‌ವಾಶ್ ಮೂಲಕ ಭರ್ಜರಿ ಗೆಲುವು ಸಾಧಿಸಿದ್ದ ಟೀಂ ಇಂಡಿಯಾ ನಾಳೆ (ಗುರುವಾರ) ಶ್ರೀಲಂಕಾ ತಂಡದ ವಿರುದ್ಧ ಟಿ20 ಸರಣಿ ಆರಂಭಿಸಲಿದೆ. ಈ ಮಧ್ಯೆ ಭಾರತ ತಂಡಕ್ಕೆ ಡಬಲ್ ಆಘಾತ ಎದುರಾಗಿದೆ.
ಗಾಯದ ಸಮಸ್ಯೆಯಿಂದ ಸ್ಫೋಟಕ ಬ್ಯಾಟರ್ ಸೂರ್ಯಕುಮಾರ್ ಯಾದವ್ ಹಾಗೂ ಫಾಸ್ಟ್ ಬೌಲರ್ ದೀಪಕ್ ಚಹರ್ ಶ್ರೀಲಂಕಾ ವಿರುದ್ಧದ ಟೂರ್ನಿಯಿಂದಲೇ ಹೊರಬಿದ್ದಿದ್ದಾರೆ. ಈ ಕುರಿತು ಬಿಸಿಸಿಐ ತನ್ನ ಅಧಿಕೃತ ಟ್ವಿಟರ್ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದೆ.
ಕಳೆದ ಭಾನುವಾರ ವೆಸ್ಟ್ ಇಂಡೀಸ್ ವಿರುದ್ಧದ ಮೂರನೇ ಹಾಗೂ ಕೊನೆಯ ಟಿ20 ಪಂದ್ಯದಲ್ಲಿ 31 ಎಸೆತಗಳಲ್ಲಿ 65 ಗಳಿಸಿ ಸೂರ್ಯ ಕುಮಾರ್ ಯಾದವ್ ಮಿಂಚಿದ್ದರು. ಅಲ್ಲದೇ ತಂಡ ಗೆಲುವಿಗೆ ಪ್ರಮುಖ ಪಾತ್ರವನ್ನು ವಹಿಸಿದ್ದರು. ಶ್ರೀಲಂಕಾ ಟೂರ್ನಿಗೆ ಟೀಂ ಇಂಡಿಯಾ ಮಾಜಿ ನಾಯಕ ವಿರಾಟ್ ಕೊಹ್ಲಿ ಹಾಗೂ ರಿಷಬ್ ಪಂತ್ಗೆ ಆಯ್ಕೆ ಸಮಿತಿ ವಿಶ್ರಾಂತಿ ನೀಡಿತ್ತು. ಸದ್ಯ ದೀಪಕ್ ಚಹರ್ ಗಾಯಗೊಂಡ ಕಾರಣದಿಂದ ಟೂರ್ನಿಯಿಂದ ದೂರವಾಗಿದ್ದು, ಇದರೊಂದಿಗೆ ಸೂರ್ಯಕುಮಾರ್ ಯಾವದ್ ಜೊತೆಗೆ ಪ್ರಮುಖ 4 ಆಟಗಾರರ ಸೇವೆಯನ್ನು ಟೀಂ ಇಂಡಿಯಾ ಕಳೆದುಕೊಂಡಿದೆ.
ಸದ್ಯ ಪ್ರಮುಖ ಆಟಗಾರರ ಅನುಪಸ್ಥಿತಿಯಲ್ಲಿ ಶ್ರೀಲಂಕಾ ವಿರುದ್ಧ ಟೀಂ ಇಂಡಿಯಾ ಯಾವ ಪ್ರದರ್ಶನ ನೀಡಲಿದೆ ಎಂಬ ಕುತೂಹಲ ಅಭಿಮಾನಿಗಳನ್ನು ಕಾಡುತ್ತಿದೆ. ಟೀಂ ಇಂಡಿಯಾ ಹಾಗೂ ಶ್ರೀಲಂಕಾ ನಡುವೆ ಗುರುವಾರ ಮೊದಲ ಟಿ-20 ಪಂದ್ಯ ಲಕ್ನೋದಲ್ಲಿ ನಡೆಯಲಿದೆ. ಆ ಬಳಿಕ ಶನಿವಾರ, ಭಾನುವಾರ ಧರ್ಮಶಾಲದಲ್ಲಿ ಎರಡನೇ ಹಾಗೂ ಮೂರನೇ ಟಿ20 ಪಂದ್ಯ ನಡೆಯಲಿದೆ.
PublicNext
23/02/2022 04:58 pm