ಕೋಲ್ಕತ್ತಾ: ಭಾರತ ಹಾಗೂ ವೆಸ್ಟ್ ಇಂಡೀಸ್ ನಡುವಿನ ಟಿ20 ಸರಣಿಯು ನಾಳೆ (ಬುಧವಾರ)ದಿಂದ ಆರಂಭವಾಗಲಿದೆ. ಮೂರು ಪಂದ್ಯಗಳ ಈ ಚುಟುಕು ಮಾದರಿಯ ಸರಣಿಯು ಕೋಲ್ಕತ್ತಾದ ಈಡನ್ ಗಾರ್ಡನ್‌ನಲ್ಲಿ ಫೆಬ್ರವರಿ 16, 18 ಹಾಗೂ 20ರಂದು ನಡೆಯಲಿದೆ.
ಭಾರತ ಏಕದಿನ ಸರಣಿಯನ್ನು ಕ್ಲೀನ್ ಸ್ವೀಪ್ ಮಾಡಿದ್ದು, ಟಿ20 ಸರಣಿಯಲ್ಲಿಯೂ ಮೇಲುಗೈ ಸಾಧಿಸುವ ವಿಶ್ವಾಸದಲ್ಲಿದೆ. ಆದರೆ ವಿಂಡೀಸ್ ತಂಡದಲ್ಲಿ ಚುಟುಕು ಮಾದರಿಗೆ ಹೇಳಿ ಮಾಡಿಸಿದ ಆಟಗಾರರ ದಂಡೇ ಇದ್ದು ತೀವ್ರ ಪೈಪೋಟಿಯನ್ನು ನಿರೀಕ್ಷಿಸಬಹುದಾಗಿದೆ. ಆದರೆ ಟಿ20 ಸರಣಿಯ ಆರಂಭಕ್ಕೂ ಮುನ್ನವೇ ಟೀಂ ಇಂಡಿಯಾಗೆ ಹಿನ್ನಡೆಯೊಂದು ಉಂಟಾಗಿದೆ.
ತಂಡದ ಉಪ ನಾಯಕ ಕೆ.ಎಲ್.ರಾಹುಲ್ ಏಕದಿನ ಸರಣಿಯ ಎರಡನೇ ಪಂದ್ಯದ ಬಳಿಕ ಗಾಯಗೊಂಡಿದ್ದು, ಸಂಪೂರ್ಣ ಟಿ20 ಸರಣಿಯಿಂದ ಹೊರಗುಳಿಯುತ್ತಿದ್ದಾರೆ. ಹೀಗಾಹಿ ಟೀಂ ಇಂಡಿಯಾ ಟಿ20 ತಂಡದ ಉಪ ನಾಯಕನ ಜವಾಬ್ದಾರಿ ಈಗ ಯುವ ಆಟಗಾರ ರಿಷಭ್ ಪಂತ್ ಹೆಗಲಿಗೆ ಬಿದ್ದಿದೆ.
ಯುವ ಆಲ್‌ರೌಂಡರ್ ವಾಷಿಂಗ್ಟನ್ ಸುಂದರ್ ಗಾಯದ ಕಾರಣದಿಂದಾಗಿ ಈ ಸರಣಿಯ ಅಲಭ್ಯವಾಗುತ್ತಿರುವುದಾಗಿ ಬಿಸಿಸಿಐ ಪ್ರಕಟಣೆಯಲ್ಲಿ ಮಾಹಿತಿ ನೀಡಿದೆ. ಹೀಗಾಗಿ ಸ್ಪಿನ್ನರ್ ಕುಲ್‌ದೀಪ್ ಯಾದವ್‌ಗೆ ಸ್ಥಾನ ನೀಡಲಾಗಿದೆ.
ಭಾರತದ ಟಿ20 ಸಂಭಾವ್ಯ ತಂಡ: ರೋಹಿತ್ ಶರ್ಮಾ (ನಾಯಕ), ರಿಷಭ್ ಪಂತ್ (ಉಪನಾಯಕ/ ವಿಕೆಟ್ ಕೀಪರ್), ಇಶಾನ್ ಕಿಶನ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಸೂರ್ಯಕುಮಾರ್ ಯಾದವ್, ವೆಂಕಟೇಶ್ ಅಯ್ಯರ್, ದೀಪಕ್ ಚಾಹರ್, ಶಾರ್ದೂಲ್ ಠಾಕೂರ್, ರವಿ ಬಿಷ್ಣೋಯ್, ಯಜುವೇಂದ್ರ ಚಾಹಲ್, ಮೊಹಮ್ಮದ್ ಸಿರಾಜ್, ಭುವನೇಶ್ವರ್ ಕುಮಾರ್, ಆವೇಶ್ ಖಾನ್, ಹರ್ಷಲ್ ಪಟೇಲ್, ಋತುರಾಜ್ ಗಾಯಕ್ವಾಡ್, ದೀಪಕ್ ಹೂಡಾ, ಕುಲದೀಪ್ ಯಾದವ್.
PublicNext
15/02/2022 08:06 pm