ನವದೆಹಲಿ: ಟೀಂ ಇಂಡಿಯಾ ಮಾಜಿ ಕ್ಯಾಪ್ಟನ್ ವಿರಾಟ್ ಕೊಹ್ಲಿ ಅವರ ಫಾರ್ಮ್ ವಿಚಾರವಾಗಿ ಪತ್ರಕರ್ತರು ಕೇಳಿದ ಪ್ರಶ್ನೆಗೆ ಭಾರತದ ಕ್ರಿಕೆಟ್ ತಂಡದ ಸೀಮಿತ ಓವರ್‌ಗಳ ನಾಯಕ ರೋಹಿತ್ ಶರ್ಮಾ ಖಾರವಾಗಿ ಪ್ರತಿಕ್ರಿಯೆ ನೀಡಿದ್ದಾರೆ.
ಹೌದು. ಭಾರತ ಹಾಗೂ ವೆಸ್ಟ್ ಇಂಡೀಸ್ ನಡುವಿನ ಏಕದಿನ ಸರಣಿ ಅಂತ್ಯವಾಗಿದ್ದು, ಈಗ ಟಿ20 ಸರಣಿಗೆ ಎರಡು ತಂಡಗಳು ಕೂಡ ಸಜ್ಜಾಗಿವೆ. ಬುಧವಾರದಿಂದ ಟಿ20 ಸರಣಿ ಆರಂಭವಾಗಲಿದ್ದು, ಕೋಲ್ಕತ್ತಾದ ಈಡನ್ ಗಾರ್ಡನ್ ಈ ಚುಟುಕು ಮಾದರಿಯ ಸರಣಿಗೆ ಆತಿಥ್ಯ ವಹಿಸಲಿದೆ. ಈ ಚುಟುಕು ಸರಣಿಯ ಆರಂಭಕ್ಕೆ ಮುನ್ನಾದಿನ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಮಾಧ್ಯಮಗಳ ಜೊತೆ ಮಾತನಾಡಿದ್ದಾರೆ.
ಮಾಧ್ಯಮಗಳ ಜೊತೆಗೆ ನಾಯಕ ರೋಹಿತ್ ಶರ್ಮಾ ಮಾತನಾಡುವ ಸಂದರ್ಭದಲ್ಲಿ ಮಾಜಿ ನಾಯಕ ವಿರಾಟ್ ಕೊಹ್ಲಿ ಫಾರ್ಮ್ ಬಗ್ಗೆ ಮತ್ತೊಮ್ಮೆ ಪ್ರಶ್ನೆಗಳು ರೋಹಿತ್ ಶರ್ಮಾಗೆ ಎದುರಾಯಿತು. ಈ ಬಗ್ಗೆ ರೋಹಿತ್ ಶರ್ಮಾ ಗರಂ ಆಗಿಯೇ ಪ್ರತಿಕ್ರಿಯಿಸಿದ್ದಾರೆ.
"ನಾನು ನೋಡುತ್ತಿರುವಂತೆ ವಿರಾಟ್ ಕೊಹ್ಲಿ ಅವರು ಉತ್ತಮವಾದ ಫಾರ್ಮ್‌ನಲ್ಲಿದ್ದಾರೆ. ಅವರು ಒಂದು ದಶಕಕ್ಕೂ ಹೆಚ್ಚು ಕಾಲದಿಂದ ಅಂತರರಾಷ್ಟ್ರೀಯ ತಂಡವೊಂದರ ಭಾಗವಾಗಿದ್ದಾರೆ. ಹಾಗಾಗಿ ಅವರಿಗೆ ಒತ್ತಡವನ್ನು ಮೆಟ್ಟಿ ನಿಲ್ಲುವುದು ಹೇಗೆಂದು ತಿಳಿದಿದೆ. ಹಾಗಾಗಿ ಎಲ್ಲವೂ ಕೂಡ ನಿಮ್ಮಿಂದಲೇ(ಮಾಧ್ಯಮ) ಆರಂಭವಾಗುತ್ತಿದೆ ಎನಿಸುತ್ತದೆ. ನೀವು ಸ್ವಲ್ಪ ಕಾಲ ಸುಮ್ಮನಿದ್ದುಬಿಟ್ಟರೆ ಎಲ್ಲವೂ ಸರಿಯಾಗಲಿದೆ" ಎಂದು ರೋಹಿತ್ ಶರ್ಮಾ ಹೇಳಿದ್ದಾರೆ.
PublicNext
15/02/2022 05:06 pm