ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

IPL Auction 2022 : "ಆದಷ್ಟು ಬೇಗ ಸಿದ್ಧವಾಗಿ ಬನ್ನಿ, ಎಮರ್ಜನ್ಸಿ ಇದೆ" ಬ್ರಿಜೇಶ್ ಪಟೇಲ್ ಒಂದೇ ಮಾತಿಗೆ ಬಂದ್ರು ಚಾರು ಶರ್ಮ!

ಬೆಂಗಳೂರು: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2022 ಹರಾಜಿನ ಮೊದಲ ದಿನ ನಡೆದ ಅಹಿತಕರ ಘಟನೆ ಐಪಿಎಲ್ ಹರಾಜು ಕಾರ್ಯಕ್ರಮ ಯಶಸ್ವಿಯಾಗಿ ನಡೆಯುವ ಬಗ್ಗೆಯೇ ಅನುಮಾನ ಹುಟ್ಟುಹಾಕಿತ್ತು. ಬ್ರಿಟನ್ ಮೂಲದ ಹರಾಜುಗಾರ ಹ್ಯೂ ಎಡ್ಮೀಡ್ಸ್, ಹೈಪೋಟೆನ್ಶನ್ ಕಾರಣದಿಂದಾಗಿ ಹರಾಜಿನ ನಡುವೆಯೇ ಕುಸಿದು ಬಿದ್ದಾಗ ಐಪಿಎಲ್ ಆಡಳಿತ ಮಂಡಳಿ ಆತಂಕಕ್ಕೆ ಒಳಗಾಗಿದ್ದು ಸಹಜ. ಎಡ್ಮೀಡ್ಸ್ ಅವರ ಆರೋಗ್ಯದೊಂದಿಗೆ ಹರಾಜು ಕಾರ್ಯಕ್ರಮವನ್ನು ಸಮರ್ಥವಾಗಿ ನಡೆಸಿಕೊಡುವ ವ್ಯಕ್ತಿ ತುರ್ತಾಗಿ ಅಗತ್ಯವಿತ್ತು. ಈ ವೇಳೆ ಐಪಿಎಲ್ ಚೇರ್ಮನ್ ಬ್ರಿಜೇಶ್ ಪಟೇಲ್‌ಗೆ ಹೊಳೆದ ಏಕೈಕ ಹೆಸರು ಚಾರು ಶರ್ಮ. ಕೆಲವೇ ಘಂಟೆಗಳಲ್ಲಿ ಐಪಿಎಲ್ ಹರಾಜು ವೇದಿಕೆಯಲ್ಲಿದ್ದ ಚಾರು ಶರ್ಮ, ಅತ್ಯಂತ ಯಶಸ್ವಿಯಾಗಿ ಕಾರ್ಯಕ್ರಮವನ್ನು ನಡೆಸಿಕೊಟ್ಟರು.

ಭಾರತದ ಕ್ರೀಡಾ ಜಗತ್ತಿನಲ್ಲಿ ಚಾರು ಶರ್ಮ ಅಪರಿಚಿತ ಹೆಸರೇನಲ್ಲ. ಆದರೆ, ಅಷ್ಟು ಕಡಿಮೆ ಸಮಯದಲ್ಲಿ ಚಾರು ಶರ್ಮ ಅವರಂಥ ಯಶಸ್ವಿ ಹರಾಜುಗಾರನನ್ನು ಐಪಿಎಲ್ ವ್ಯವಸ್ಥೆ ಮಾಡಿದ್ದು ಹೇಗೆ ಎನ್ನುವ ಕುತೂಹಲ ಎಲ್ಲರಲ್ಲೂ ಇದೆ. ಹರಾಜು ಕಾರ್ಯಕ್ರಮದ ಬಳಿಕ ಮಾತನಾಡಿದ ಚಾರು ಶರ್ಮ, ಇಡೀ ಹರಾಜು ಪ್ರಕ್ರಿಯೆ ನಡೆಯಲಿರುವ ಬೆಂಗಳೂರಿನ ಐಟಿಸಿ ಗಾರ್ಡೇನಿಯಾ ಹೋಟೆಲ್ ಗಿಂತ ಬಹಳ ದೂರದಲ್ಲಿ ನಾನು ವಾಸ್ತವ್ಯ ಮಾಡಿಲ್ಲ. ನಾನು ತೀರಾ ಸಮೀಪದಲ್ಲೇ ಇದ್ದೇನೆ ಎಂದು ಹೇಳಿದ್ದರು.

ಆದರೆ, ಎಡ್ಮೀಡ್ಸ್ ಆರೋಗ್ಯದಲ್ಲಿ ಏರುಪೇರು ಆದಾಗ, ಐಪಿಎಲ್ ಚೇರ್ಮನ್ ಬ್ರಿಜೇಶ್ ಪಟೇಲ್ ತಕ್ಷಣವೇ ಚಾರು ಶರ್ಮ ಅವರಿಗೆ ಫೋನ್ ಕರೆ ಮಾಡಿದರು. "ಶೂ, ಬ್ಲೇಜರ್ ಎಲ್ಲವನ್ನೂ ಧರಿಸಿಕೊಂಡು ತಕ್ಷಣವೇ ಐಪಿಎಲ್ ಹರಾಜು ನಡೆಯುತ್ತಿರುವ ಹೋಟೆಲ್ ಗೆ ಬನ್ನಿ" ಇದೊಂದು ಮಾತು ಹೇಳಿದ ಬ್ರಿಜೇಶ್, "ಇದು ಎಮರ್ಜೆನ್ಸಿ" ಎಂದಷ್ಟೇ ಹೇಳಿದರು. ಇನ್ನೊಂದು ಮಾತನ್ನಾಡದ ಚಾರು ಶರ್ಮ ಕೆಲವೇ ನಿಮಿಷಗಳಲ್ಲಿ ಐಟಿಸಿ ಗಾರ್ಡೇನಿಯಾ ಹೋಟೆಲ್ ಗೆ ಆಗಮಿಸಿದ್ದರು. ಕರ್ನಾಟಕ ಕ್ರಿಕೆಟ್ ಸಂಸ್ಥೆಯ ಕಾರ್ಯದರ್ಶಿಯಾಗಿದ್ದ ಅವಧಿಯಲ್ಲಿ ಕೆಪಿಎಲ್ ಟೂರ್ನಿ ನಡೆಸಿದ್ದ ಬ್ರಿಜೇಶ್ ಪಟೇಲ್, ಆ ಟೂರ್ನಿಯ ಹರಾಜು ಕಾರ್ಯಕ್ರಮವನ್ನು ಚಾರು ಶರ್ಮ ಯಶಸ್ವಿಯಾಗಿ ನಡೆಸಿಕೊಟ್ಟಿದ್ದರ ಅರಿವು ಹೊಂದಿದ್ದರು. ಇದರಿಂದಾಗಿ ಬೇರೆ ಯೋಚನೆಯನ್ನೇ ಮಾಡದೇ ಚಾರು ಶರ್ಮ ಅವರಿಗೆ ಕರೆ ಮಾಡಿದ್ದರು.

"ನಾನು ಹೋಟೆಲ್‌ನಿಂದ ಹೆಚ್ಚು ದೂರದಲ್ಲಿರಲಿಲ್ಲ, ಪಕ್ಕದಲ್ಲೇ ವಾಸವಿದ್ದೆ. ನಾನು ಹೋಟೆಲ್ ಗೆ ತಲುಪಿದಾಗ, ಹರಾಜುದಾರ ಹ್ಯೂ ಎಡ್ಮೀಡ್ಸ್ ಗೆ ಏನಾಗಿದೆ ಎನ್ನುವುದನ್ನು ಸ್ಪಷ್ಟವಾಗಿ ಹೇಳಲಾಯಿತು. ಅದಕ್ಕೆ ನಾನು ಸರಿ ಮುಂದಿನ ಕೆಲಸಗಳನ್ನು ಮಾಡೋಣ, 15 ನಿಮಿಷದ ಅವಧಿಯಲ್ಲಿ ಮುಂದೇನಾಗಬೇಕು ಎನ್ನುವುದನ್ನು ತಿಳಿಸಲಾಯಿತು. ಇಲ್ಲಿಯವರೆಗೆ ಏನೆಲ್ಲಾ ಆಗಿದೆ. ಏನೆಲ್ಲಾ ಆಗುವುದು ಬಾಕಿ ಇದೆ ಎನ್ನುವುದನ್ನು ಸ್ಪಷ್ಟವಾಗಿ ಕೇಳಿಕೊಂಡೆ. ಇನ್ನೊಂದೆಡೆ ಐಪಿಎಲ್ ಅಧಿಕಾರಿಗಳು, "ನಿಮಗೆ ಸಿದ್ಧತೆಗೆ ಸಮಯ ಬೇಕಿದ್ದಲ್ಲಿ ವಿರಾಮವನ್ನು ಇನ್ನೂ 15 ನಿಮಿಷ ವಿಸ್ತರಣೆ ಮಾಡುತ್ತೇವೆ' ಎಂದು ಹೇಳಿದರು. ಆದರೆ, ನಾನು ಬೇಡ. ನಾನು ಮ್ಯಾನೇಜ್ ಮಾಡಬಲ್ಲೆ ಎಂದು ಹೇಳಿದೆ' ಎಂದು ಚಾರು ಶರ್ಮ ತಿಳಿಸಿದ್ದಾರೆ.

ಚಾರು ಪ್ರಸಿದ್ಧ ಕ್ರೀಡಾ ನಿರೂಪಕರಾಗಿದ್ದರೂ, ಅವರು ಹಲವಾರು ಹರಾಜು ಕಾರ್ಯಕ್ರಮ ನಡೆಸಿದ್ದಾರೆ ಎನ್ನುವುದು ಅನೇಕರಿಗೆ ತಿಳಿದಿಲ್ಲ. ಇದರಿಂದಾಗಿ ಹ್ಯೂ ಎಡ್ಮೀಡ್ಸ್ ರಿಂದ ತೆರವಾದ ಸ್ಥಾನವನ್ನು ತುಂಬುವುದು, ಅವರಿಗೆ ಕಷ್ಟವಾಗಿರಲಿಲ್ಲ. "ಇದನ್ನು ನಾನು ಇಷ್ಟಪಡುತ್ತೇನೆ. ಹರಾಜು ನಡೆಸಿಕೊಡುವುದು ನನಗೆ ಹೊಸದಲ್ಲ. ಹ್ಯಾಮರ್ ಬಾರಿಸಿದ ಇನ್ನೊಂದು ದಿನವಷ್ಟೇ. ಬಹುಶಃ ಈ ಕಾರ್ಯಕ್ರಮವನ್ನು ಸಾಕಷ್ಟು ಹೆಚ್ಚಿನ ಜನ ನೋಡುತ್ತಿದ್ದಾರೆ ಎನ್ನುವುದಷ್ಟೇ ವ್ಯತ್ಯಾಸ.ವೃತ್ತಿಪರ ಕೆಲಸ ಎಂದರೆ ಅದು ವೃತ್ತಿಪರ ಕೆಲಸ ಮಾತ್ರ. ಅದರಲ್ಲಿ ಬೇರೆ ಯಾವುದನ್ನೂ ಯೋಚಿಸಲು ಹೋಗಬಾರದು' ಎಂದು ಚಾರು ಶರ್ಮ ತಿಳಿಸಿದ್ದಾರೆ.

2ನೇ ದಿನ ಐಪಿಎಲ್ ಹರಾಜು ಕಾರ್ಯಕ್ರಮಕ್ಕೂ ಮುನ್ನ ವಿಡಿಯೋ ಸಂದೇಶದಲ್ಲಿ ಮಾತನಾಡಿದ ಹ್ಯೂ ಎಡ್ಮೀಡ್ಸ್, ನಾನು ಸಂಪೂರ್ಣವಾಗಿ ಕ್ಷೇಮವಾಗಿದ್ದೇನೆ. ಆದರೆ, ಹರಾಜು ಕಾರ್ಯಕ್ರಮವನ್ನು ಶೇ. 100ರಷ್ಟು ವಿಶ್ವಾಸದಿಂದ ನಡೆಸಿಕೊಡುತ್ತೇನೆ ಎನ್ನುವ ಧೈರ್ಯ ನನಗೆ ಬಂದಿಲ್ಲ. ಆ ಕಾರಣಕ್ಕಾಗಿ ಚಾರು ಶರ್ಮ ಅವರೇ ಕಾರ್ಯಕ್ರಮ ನಡೆಸಿಕೊಡುತ್ತಾರೆ' ಎಂದು ಹೇಳಿದ್ದರು.

ಕೃಪೆ: ಸುವರ್ಣ ನ್ಯೂಸ್

Edited By : Vijay Kumar
PublicNext

PublicNext

13/02/2022 08:49 pm

Cinque Terre

26.47 K

Cinque Terre

1

ಸಂಬಂಧಿತ ಸುದ್ದಿ