ಬೆಂಗಳೂರು: ಬೆಂಗಳೂರಿನಲ್ಲಿ ನಡೆದ ಐಪಿಎಲ್ 2022ರ ಮೊದಲ ದಿನದ ಹರಾಜಿನಲ್ಲಿ 10 ಆಟಗಾರರು 10 ಕೋಟಿ ರೂ.ಗೂ ಹೆಚ್ಚು ಗಳಿಸಿದ್ದು ಐಪಿಎಲ್ ಇತಿಹಾಸದಲ್ಲಿ ಇದೇ ಮೊದಲು. ಹೀಗೆ ಆರ್ಸಿಬಿ ಕೂಡ ಮೊದಲ ದಿನ 8 ಆಟಗಾರರನ್ನು ಖರೀದಿಸಿದೆ. ಅಚ್ಚರಿ ಎಂದರೆ 57 ಕೋಟಿ ರೂಪಾಯಿಯೊಂದಿಗೆ ಹರಾಜಿನಲ್ಲಿ ಕಾಣಿಸಿಕೊಂಡ ಆರ್ಸಿಬಿ ಮೊದಲ ದಿನವೇ ಬಹುತೇಕ ಮೊತ್ತವನ್ನು ಖರ್ಚು ಮಾಡಿದೆ.
ಯಾರಿಗೆ ಎಷ್ಟು ಹಣ?:
ಆರ್ಸಿಬಿ ಖರೀದಿಸಿದ ಮೊದಲ ಆಟಗಾರ ಫಾಫ್ ಡುಪ್ಲೆಸಿಸ್ಗೆ 7 ಕೋಟಿ ರೂ., ಬಳಿಕ ಹರ್ಷಲ್ ಪಟೇಲ್ಗೆ 10.75 ಕೋಟಿ ರೂ. ಹಾಗೂ ಅಚ್ಚರಿಯ ಆಯ್ಕೆಯಲ್ಲಿ ವನಿಂದು ಹಸರಂಗಗೆ 10.75 ಕೋಟಿ ರೂ. ನೀಡಿ ಖರೀದಿಸಲಾಗಿದೆ. ಇನ್ನು ದಿನೇಶ್ ಕಾರ್ತಿಕ್ 5.50 ಕೋಟಿ ನೀಡಿದೆ. ಹಾಗೆಯೇ ಯುವ ವಿಕೆಟ್ ಕೀಪರ್ ಬ್ಯಾಟ್ಸ್ಮನ್ ಅನೂಜ್ ರಾವತ್ ಅವರನ್ನೂ ಕೂಡ 3.40 ಕೋಟಿ ನೀಡಿ ಖರೀದಿಸಿ ಅಚ್ಚರಿ ಮೂಡಿಸಿದೆ.
ಆಸ್ಟ್ರೇಲಿಯಾ ವೇಗಿ ಜೋಶ್ ಹ್ಯಾಝಲ್ವುಡ್ಗೆ 7.75 ಕೋಟಿ ರೂ., ಶಹಬಾಜ್ ಅಹಮದ್‌ಗೆ 2. 40 ಕೋಟಿ ರೂ. ಹಾಗೂ ಆಕಾಶ್ ದೀಪ್ ಅವರನ್ನು 20 ಲಕ್ಷ ರೂ.ಗೆ ಆರ್ಸಿಬಿ ಖರೀದಿಸಿದೆ. ಅಲ್ಲಿಗೆ ಮೊದಲ ದಿನವೇ ಆರ್ಸಿಬಿ ತಂಡವು ಕೇವಲ 8 ಆಟಗಾರರಿಗೆ 47 ಕೋಟಿ 75 ಲಕ್ಷ ರೂ. ಖರ್ಚು ಮಾಡಿದೆ.
ರಿಟೈನ್ ಆಟಗಾರರು ಸೇರಿದಂತೆ ಆರ್ಸಿಬಿ ತಂಡದಲ್ಲಿ 11 ಆಟಗಾರರಿದ್ದಾರೆ. ಆದರೆ ಐಪಿಎಲ್ ನಿಯಮದ ಪ್ರಕಾರ ಒಂದು ತಂಡದಲ್ಲಿ ಕನಿಷ್ಠ 18 ಆಟಗಾರರು ಇರಲೇಬೇಕು. ಅಂದರೆ ಆರ್‌ಸಿಬಿಗೆ ಇನ್ನೂ 7 ಆಟಗಾರರ ಅವಶ್ಯಕತೆಯಿದೆ. ಇದೀಗ ಆರ್ಸಿಬಿ ಬಳಿ ಉಳಿದಿರುವುದು 9.25 ಕೋಟಿ ರೂ. ಮಾತ್ರ. ಅಂದರೆ ಈ ಮೊತ್ತದಲ್ಲಿ ಒಟ್ಟು 7 ಆಟಗಾರರನ್ನು ಖರೀದಿಸಬೇಕಾಗುತ್ತದೆ.
PublicNext
13/02/2022 02:25 pm