ಬೆಂಗಳೂರು: ನಗರದಲ್ಲಿ ನಡೆಯುತ್ತಿರುವ 2022ರ ಐಪಿಎಲ್ ಹರಾಜು ಪ್ರಕ್ರಿಯೆಯಲ್ಲಿ ಬೇಡಿಕೆಯುಳ್ಳ ಆಟಗಾರರ ಮೇಲೆ ಹಣದ ಮಳೆ ಸುರಿದಿದೆ. ಅತಿ ಹೆಚ್ಚು ಎಂದರೆ ಕ್ರಮವಾಗಿ ಶ್ರೇಯಸ್ ಅಯ್ಯರ್-12.25 ಕೋಟಿ ಹಾಗೂ ಹರ್ಷಲ್ ಪಟೇಲ್ 10 ಕೋಟಿ 75 ಲಕ್ಷ ರೂ. ಬೆಲೆ ಪಡೆದಿದ್ದಾರೆ. ಇನ್ನು ಕಳೆದ ಆವೃತ್ತಿಯಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಪರವಾಗಿ ಆಡಿ ಮಿಂಚು ಹರಿಸಿದ್ದ ಆವೇಶ್ ಖಾನ್ ಈ ಬಾರಿಯ ಹರಾಜಿನಲ್ಲಿ ಪಡೆದುಕೊಂಡ ಮೊತ್ತ ಬರೊಬ್ಬರಿ 10 ಕೋಟಿ ರೂಪಾಯಿ. ಈ ಮೂಲಕ ಆವೇಶ್ ಖಾನ್ ಐಪಿಎಲ್ ಇತಿಹಾಸದಲ್ಲಿ ಹೊಸ ದಾಖಲೆ ಬರೆದಿದ್ದಾರೆ. ವೇಗದ ಬೌಲರ್ ಕಗಿಸೊ ರಬಾಡ ಕೂಡ ಪಂಜಾಬ್ ಕಿಂಗ್ಸ್ 9.25 ಕೋಟಿ ರೂ., ಜೇಸನ್ ಹೋಲ್ಡರ್ ಸಹ 8.75 ಕೋಟಿ ರೂ.ಗಳ ಬೆಲೆಯನ್ನು ತಮ್ಮದಾಗಿಸಿಕೊಂಡಿದ್ದಾರೆ.
IPL ಹರಾಜು 2022ರ ಮೊದಲ ಸುತ್ತಿನಲ್ಲಿ, ಸುರೇಶ್ ರೈನಾ ಅವರನ್ನು ಖರೀದಿಸಲು ಯಾವುದೇ ಫ್ರಾಂಚೈಸಿ ಮುಂದೆ ಬರಲಿಲ್ಲ. ಅವರ ಮೂಲ ಬೆಲೆ 2 ಕೋಟಿ ರೂ. ಆಗಿದ್ದು ಚೆನ್ನೈ ಸೂಪರ್ ಕಿಂಗ್ಸ್ ಕೂಡ ಇವರ ಮೇಲೆ ಬಾಜಿ ಕಟ್ಟಲಿಲ್ಲ. ಇವರ ಜೊತೆಗೆ ಸ್ಟೀವ್ ಸ್ಮಿತ್ ಅವರನ್ನು ಯಾವುದೇ ತಂಡ ಖರೀದಿಸಿಲ್ಲ.
ಐಪಿಎಲ್ 2022 ರ ಹರಾಜಿನಲ್ಲಿ, ಮುಂದಿನ ಕೆಲವು ವರ್ಷಗಳವರೆಗೆ ತಂಡವನ್ನು ಬಲಪಡಿಸುವ ತಂಡವನ್ನು ಸಿದ್ಧಪಡಿಸುವುದು ತಂಡಗಳ ಮುಂದಿರುವ ಸವಾಲು. ಇಂತಹ ಪರಿಸ್ಥಿತಿಯಲ್ಲಿ ಅತಿ ಹೆಚ್ಚು ಟಿ20 ಪ್ರಶಸ್ತಿ ಗೆದ್ದ ಅನುಭವ ಹೊಂದಿರುವ 38ರ ಹರೆಯದ ಆಟಗಾರನ ಮೇಲೆ ಚೆನ್ನೈ ಸೂಪರ್ ಕಿಂಗ್ಸ್ ಬೆಟ್ಟಿಂಗ್ ಕಟ್ಟಿದೆ. CSK ಈ ಕೆರಿಬಿಯನ್ ಆಲ್ ರೌಂಡರ್‌ಅನ್ನು 4.40 ಕೋಟಿ ರೂ.ಗೆ ಖರೀದಿಸಲಾಗಿದೆ. ಬ್ರಾವೋ ಅವರನ್ನು ಖರೀದಿಸಲು ತಂಡಗಳ ನಡುವೆ ಸಾಕಷ್ಟು ಪೈಪೋಟಿ ಏರ್ಪಟ್ಟಿತ್ತು. ಆದರೆ ಅಂತಿಮವಾಗಿ, ಹಳದಿ ಜೆರ್ಸಿ ಸೂಪರ್ ಕಿಂಗ್ಸ್ ಗೆದ್ದುಕೊಂಡಿದೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ವಿಕೆಟ್ ಕೀಪರ್ ಆಗಿದ್ದ ದಿನೇಶ್ ಕಾರ್ತಿಕ್ ಸುಮಾರು 7 ವರ್ಷಗಳ ಬಳಿಕ ಮತ್ತೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಸೇರಿದ್ದು ಈ ಬಾರಿಯ ಮೆಗಾ ಹರಾಜಿನಲ್ಲಿ 5.50 ಕೋಟಿ ಪಡೆದುಕೊಂಡಿದ್ದಾರೆ.
PublicNext
12/02/2022 10:01 pm