ಪಾರ್ಲ್: ಕ್ವಿಂಟನ್ ಡಿ ಕಾಕ್ ಹಾಗೂ ಜನ್ನೆಮನ್ ಮಲನ್ ಅಬ್ಬರದ ಬ್ಯಾಟಿಂಗ್ ಸಹಾಯದಿಂದ ದಕ್ಷಿಣ ಆಫ್ರಿಕಾ ತಂಡವು ಭಾರತದ ವಿರುದ್ಧ 7 ವಿಕೆಟ್ಗಳಿಂದ ಗೆದ್ದು ಬೀಗಿದ್ದು, 2-0ರಿಂದ ಸರಣಿ ವಶಕ್ಕೆ ಪಡೆದುಕೊಂಡಿದೆ. ಟೆಸ್ಟ್ ಸರಣಿ ಸೋಲಿನ ಬೆನ್ನಲ್ಲೇ ಭಾರತ ತಂಡಕ್ಕೆ ಮತ್ತೊಂದು ಹಿನ್ನಡೆಯಾಗಿದೆ.
ಪಾರ್ಲ್ನ ಬೋಲ್ಯಾಂಡ್ ಪಾರ್ಕ್ ನಲ್ಲಿ ನಡೆದ ಎರಡನೇ ಏಕದಿನ ಪಂದ್ಯದಲ್ಲಿ ಟಾಸ್ ಗೆದ್ದ ಟೀಂ ಇಂಡಿಯಾದ ನಾಯಕ ಕೆ.ಎಲ್.ರಾಹುಲ್ ಬ್ಯಾಟಿಂಗ್ ಆಯ್ದುಕೊಂಡಿದ್ದರು. ಅದರಂತೆ ಮೊದಲು ಬ್ಯಾಟಿಂಗ್ ಮಾಡಿದ್ದ ಭಾರತ ತಂಡವು 6 ವಿಕೆಟ್ ನಷ್ಟಕ್ಕೆ 287 ರನ್ ಗಳಿಸಲು ಶಕ್ತವಾಗಿತ್ತು.
288 ರನ್ಗಳ ಗುರಿ ಬೆನ್ನತ್ತಿದ ದಕ್ಷಿಣ ಆಫ್ರಿಕಾ ತಂಡವು 11 ಎಸೆತಗಳು ಬಾಕಿ ಇರುವಂತೆ 3 ವಿಕೆಟ್ ನಷ್ಟಕ್ಕೆ 288 ರನ್ ಗಳಿಸಿ ಭರ್ಜರಿ ಗೆಲುವು ಸಾಧಿಸಿದೆ. ತಂಡದ ಪರ ಕ್ವಿಂಟನ್ ಡಿ ಕಾಕ್ 78 ರನ್, ಜನ್ನೆಮನ್ ಮಲನ್ 91 ರನ್, ತೆಂಬಾ ಬವುಮಾ 35 ರನ್, ಏಡನ್ ಮಕ್ರಮ್ ಅಜೇಯ 37 ರನ್ ಹಾಗೂ ರಾಸ್ಸಿ ವ್ಯಾನ್ ಡೆರ್ ಡುಸ್ಸೆನ್ ಅಜೇಯ 37 ರನ್ ಗಳಿಸಿದರು.
ಇದಕ್ಕೂ ಮುನ್ನ ಭಾರತದ ಪರ ರಿಷಭ್ ಪಂತ್ 85 ರನ್ (71 ಎಸೆತ), ಕೆ.ಎಲ್.ರಾಹುಲ್ 55 ರನ್ (79 ಎಸೆತ), ಶಾರ್ದೂಲ್ ಠಾಕೂರ್ ಅಜೇಯ 40 ರನ್, ಶಿಖರ್ ಧವನ್ 29 ರನ್, ಆರ್. ಅಶ್ವಿನ್ ಅಜೇಯ 25 ರನ್ ಗಳಿಸಿದ್ದರು.
PublicNext
21/01/2022 10:12 pm