ದುಬೈ: ಐಸಿಸಿ ಬುಧವಾರ 2021ರ ವರ್ಷದ ಟಿ20 ತಂಡವನ್ನು ಪ್ರಕಟಿಸಿದೆ. ಈ ತಂಡಕ್ಕೆ ಪಾಕಿಸ್ತಾನ ತಂಡದ ನಾಯಕ ಬಾಬರ್ ಅಜಮ್ ನಾಯಕನಾಗಿದ್ದಾರೆ. ಆದರೆ ಭಾರತ ತಂಡದಿಂದ ಯಾವೊಬ್ಬ ಆಟಗಾರ ಈ ತಂಡದಲ್ಲಿ ಅವಕಾಶ ಗಿಟ್ಟಿಸಿಕೊಳ್ಳುವಲ್ಲಿ ವಿಫಲರಾಗಿದ್ದಾರೆ.
2021ರಲ್ಲಿ ನೀಡಿರುವ ಪ್ರದರ್ಶನದ ಮೇರೆಗೆ ಈ 11ರ ಬಳಗವನ್ನು ಆಯ್ಕೆ ಮಾಡಿದೆ. ಪಾಕಿಸ್ತಾನದ ಬಾಬರ್ ಅಜಮ್, ಕಳೆದ ವರ್ಷ ವಿಶ್ವ ದಾಖಲೆಯ 1300+ ಟಿ20 ರನ್ಗಳಿಸಿದ ವಿಕೆಟ್ ಕೀಪರ್ ಮೊಹಮ್ಮದ್ ರಿಜ್ವಾನ್ ಮತ್ತು ಯುವ ವೇಗಿ ಶಾಹೀನ್ ಆಫ್ರಿದಿ ಅವಕಾಶ ಪಡೆದಿದ್ದಾರೆ. ಅಜಮ್ 2021ರಲ್ಲಿ 939 ರನ್ಗಳಿಸಿದರೆ, ರಿಜ್ವಾನ್ 1326 ರನ್ ಮತ್ತು ಆಫ್ರಿದಿ 23 ವಿಕೆಟ್ ಪಡೆದಿದ್ದರು.
ಇಂಗ್ಲೆಂಡ್ ತಂಡದ ಜೋಶ್ ಬಟ್ಲರ್(269 ರನ್) ರಿಜ್ವಾನ್ ಜೊತೆಗೆ ಆರಂಭಿಕರಾಗಿ ಆಯ್ಕೆಯಾಗಿದ್ದಾರೆ. 4ನೇ ಕ್ರಮಾಂಕಕ್ಕೆ ದಕ್ಷಿಣ ಆಫ್ರಿಕಾದ ಐಡೆನ್ ಮಾರ್ಕ್ರಮ್(570 ರನ್+5 ವಿಕೆಟ್), 6ನೇ ಕ್ರಮಾಂಕದಲ್ಲಿ ವಿಶ್ವಕಪ್ ಹೀರೋ ಆಸ್ಟ್ರೇಲಿಯಾದ ಮಿಚೆಲ್ ಮಾರ್ಷ್(627 ರನ್+8 ವಿಕೆಟ್), 7ನೇ ಕ್ರಮಾಂಕದಲ್ಲಿ ದಕ್ಷಿಣ ಆಫ್ರಿಕಾದ ಡೇವಿಡ್ ಮಿಲ್ಲರ್(377 ರನ್) ಆಯ್ಕೆಯಾಗಿದ್ದಾರೆ.
ಬೌಲರ್ಗಳ ವಿಭಾಗದಲ್ಲಿ ಶಾಹೀನ್ ಆಫ್ರಿದಿ ಜೊತೆಗೆ ಶ್ರೀಲಂಕಾದ ವನಿಡು ಹಸರಂಗ(36 ವಿಕೆಟ್+ 196 ರನ್), ದ. ಆಫ್ರಿಕಾದ ತಬ್ರೈಜ್ ಶಮ್ಸಿ(36 ವಿಕೆಟ್), ಆಸೀಸ್ನ ಜೋಶ್ ಹೆಜಲ್ವುಡ್(23 ವಿಕೆಟ್), ಬಾಂಗ್ಲಾದೇಶದ ಮುಸ್ತಫಿಜುರ್ ರೆಹಮಾನ್(28) 2021ರ ಐಸಿಸಿ ಟಿ20 ತಂಡದಲ್ಲಿ ಅವಕಾಶ ಪಡೆದಿದ್ದಾರೆ.
ಐಸಿಸಿ ವರ್ಷದ ಟಿ20 ತಂಡ : ಬಾಬರ್ ಅಜಾನ್ (ನಾಯಕ), ಜೋಸ್ ಬಟ್ಲರ್, ಮೊಹಮ್ಮದ್ ರಿಜ್ವಾನ್, ಐಡೆನ್ ಮಾರ್ಕ್ರಮ್, ಮಿಚೆಲ್ ಮಾರ್ಷ್, ಡೇವಿಡ್ ಮಿಲ್ಲರ್, ತಬ್ರೈಜ್ ಶಮ್ಸಿ, ಜೋಶ್ ಹ್ಯಾಜಲ್‌ವುಡ್, ವನಿಡು ಹಸರಂಗಾ, ಮುಸ್ತಫಿಜುರ್ ರೆಹಮಾನ್, ಶಾಹೀನ್ ಆಫ್ರಿದಿ.
PublicNext
19/01/2022 08:01 pm