ಬ್ರಿಸ್ಬೇನ್: ಟೆಸ್ಟ್ ಕ್ರಿಕೆಟ್‌ಗೆ ಕ್ಯಾಪ್ಟನ್ ಆಗಿ ಆಸ್ಟ್ರೇಲಿಯಾದ ಅನುಭವಿ ವೇಗದ ಬೌಲರ್ ಪ್ಯಾಟ್ ಕಮಿನ್ಸ್ ಭರ್ಜರಿ ಆರಂಭ ಪಡೆದಿದ್ದಾರೆ.
ಬ್ರಿಸ್ಬೇನ್‌ನ ಗಬ್ಬಾದಲ್ಲಿ ನಡೆದ ಪ್ರತಿಷ್ಠಿತ ಆ್ಯಷಸ್ ಟೆಸ್ಟ್ ಸರಣಿ ಮೊದಲ ದಿನದಾಟದಲ್ಲಿ ಕಾಂಗರೂಗಳ ದಾಳಿಗೆ ಇಂಗ್ಲೆಂಡ್ ನೆಲಕಚ್ಚಿದೆ. ಮೂರನೇ ಸೆಷನ್ ಮಳೆಯಿಂದಾಗಿ ಹಾಳಾದರೂ ಸಹ ಇಂಗ್ಲೆಂಡ್ ಟೀಂ ಕೇವಲ 147 ರನ್‌ಗಳಿಗೆ ಆಲೌಟ್ ಆಗಿದೆ.
ಆಸ್ಟ್ರೇಲಿಯಾ ಪರ ಭರ್ಜರಿ ಬೌಲಿಂಗ್ ದಾಳಿ ಸಂಘಟಿಸಿದ ನಾಯಕ ಪ್ಯಾಟ್ ಕಮಿನ್ಸ್, 13.1 ಓವರ್‌ಗಳಲ್ಲಿ 38ಕ್ಕೆ 5 ವಿಕೆಟ್ ಉರುಳಿಸಿದರು. ಈ ಮೂಲಕ ನಾಯಕನಾಗಿ ಆಡಿದ ಮೊದಲ ಪಂದ್ಯದಲ್ಲೇ ಐದು ವಿಕೆಟ್ ಸಾಧನೆ ಮಾಡಿದ ಕೆಲವೇ ದಿಗ್ಗಜರ ದಾಖಲೆ ಪಟ್ಟಿಗೆ ಕಮಿನ್ಸ್ ಸೇರ್ಪಡೆಯಾಗಿದ್ದಾರೆ. ಭಾರತ ತಂಡದ ಮಾಜಿ ನಾಯಕ ಅನಿಲ್ ಕುಂಬ್ಳೆ, ಪಾಕ್ ದಂತಕತೆ ವಕಾರ್ ಯೂನಿಸ್ ಮತ್ತು ವೆಸ್ಟ್ ಇಂಡೀಸ್‌ನ ದಿಗ್ಗಜ ಕರ್ಟ್ಲೀ ವಾಲ್ಷ್ ಈ ಸಾಧನೆ ಮೆರೆದ ಆಟಗಾರರ ಪಟ್ಟಿಯಲ್ಲಿದ್ದಾರೆ.
PublicNext
08/12/2021 05:46 pm