ಬೆಂಗಳೂರು: ನವೆಂಬರ್ 30ರಂದು ನಡೆದ ರಿಟೆನ್ಷನ್ ಪ್ರಕ್ರಿಯೆಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ವಿರಾಟ್ ಕೊಹ್ಲಿಗೆ 15 ಕೋಟಿ ರೂ. ನೀಡುವ ಮೂಲಕ ಮೊದಲನೇ ಆಟಗಾರನಾಗಿ ರಿಟೈನ್ ಮಾಡಿಕೊಂಡಿದೆ. ಹೀಗೆ ನಾಯಕನ ಸ್ಥಾನವನ್ನು ತ್ಯಜಿಸಿದ ನಂತರ ಓರ್ವ ಆಟಗಾರನಾಗಿ ಆರ್‌ಸಿಬಿ ತಂಡದಲ್ಲಿ ಮುಂದುವರಿಯುತ್ತಿರುವ ವಿರಾಟ್ ಕೊಹ್ಲಿ ಫ್ರಾಂಚೈಸಿಯಿಂದ ರಿಟೈನ್ ಆದ ಬಳಿಕ ವಿಡಿಯೋವೊಂದರಲ್ಲಿ ಮಾತನಾಡಿದ್ದು, ಆರ್‌ಸಿಬಿ ತಂಡ ಮತ್ತು ಅಭಿಮಾನಿಗಳ ಕುರಿತಾಗಿ ವಿಶೇಷವಾಗಿ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ.
ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿ ಜೊತೆಗಿನ ಪಯಣ ಮತ್ತೆ ಮುಂದುವರೆದಿದೆ. ಇನ್ನೂ 3 ವರ್ಷಗಳ ಕಾಲ ಈ ಫ್ರಾಂಚೈಸಿಯ ಜೊತೆ ಇರುವುದು ತುಂಬಾ ಖುಷಿಯ ವಿಚಾರ. ಇನ್ನೂ ಅತ್ಯುತ್ತಮವಾದದ್ದು ಬರಲಿವೆ ಎನ್ನುವ ವಿಶ್ವಾಸದಲ್ಲಿದ್ದೇನೆ ಎಂದು ವಿರಾಟ್ ಕೊಹ್ಲಿ ಹೇಳಿಕೆ ನೀಡಿದ್ದಾರೆ.
ಹೀಗೆ ವಿರಾಟ್ ಕೊಹ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಕುರಿತಾಗಿ ರಿಟೇನ್ ಆದ ಬಳಿಕ ಮಾತನಾಡಿರುವ ವಿಡಿಯೋವನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ತನ್ನ ಅಧಿಕೃತ ಟ್ವಿಟರ್ ಖಾತೆಯಲ್ಲಿ ಟ್ವೀಟ್ ಮಾಡಿದ್ದು ಸಾಕಷ್ಟು ವೈರಲ್ ಆಗಿದೆ.
ವಿರಾಟ್ ಕೊಹ್ಲಿ ಐಪಿಎಲ್ ಇತಿಹಾಸದಲ್ಲಿಯೇ ಆರ್‌ಸಿಬಿ ತಂಡವನ್ನು ಹೊರತುಪಡಿಸಿ ಬೇರೆ ಯಾವುದೇ ತಂಡದ ಪರ ಕೂಡ ಆಡಿಲ್ಲ ಎಂಬುದು ಒಂದು ರೀತಿಯ ಸಾಧನೆ ಕೂಡ ಹೌದು. ಕೇವಲ ಒಂದು ಕ್ರಿಕೆಟ್ ತಂಡವನ್ನಾಗಿ ಮಾತ್ರವಲ್ಲದೇ ಆರ್‌ಸಿಬಿಯನ್ನು ತನ್ನ ಸ್ವಂತ ಕುಟುಂಬದಂತೆಯೇ ಯಾವಾಗಲೂ ಭಾವಿಸುವ ವಿರಾಟ್ ಕೊಹ್ಲಿ ಬೆಂಗಳೂರನ್ನು ತನ್ನ ಎರಡನೇ ಮನೆ ಎಂದು ಕೂಡ ಈ ಹಿಂದೆ ಮಾತನಾಡಿದ್ದರು.
PublicNext
01/12/2021 06:27 pm