ಕೋಲ್ಕತ್ತಾ: ಹಿಟ್‌ಮ್ಯಾನ್ ಖ್ಯಾತಿಯ ರೋಹಿತ್ ಶರ್ಮಾ ಟೀಂ ಇಂಡಿಯಾ ಟಿ20 ಕ್ರಿಕೆಟ್ ತಂಡದ ನಾಯಕನಾಗಿ ಆಯ್ಕೆಯಾದ ಬಳಿಕ ಆಡಿದ ಮೊದಲ ಸರಣಿಯಲ್ಲೇ ಭರ್ಜರಿ ಗೆಲುವುದು ಸಾಧಿಸಿದ್ದಾರೆ. ಜೊತೆಗೆ ಹೊಸ ದಾಖಲೆಯೊಂದನ್ನು ತಮ್ಮ ಹೆಸರಿಗೆ ಬರೆದುಕೊಂಡಿದ್ದಾರೆ.
ಚುಟುಕು ಮಾದರಿಯ ಕ್ರಿಕೆಟ್‌ನಲ್ಲಿ ಅತಿಹೆಚ್ಚು ಇನಿಂಗ್ಸ್‌ಗಳಲ್ಲಿ 50ಕ್ಕಿಂತ ಹೆಚ್ಚು ರನ್ ಗಳಿಸಿದ ಆಟಗಾರ ಎಂಬ ಶ್ರೇಯಕ್ಕೆ ರೋಹಿತ್ ಭಾಜನರಾಗಿದ್ದಾರೆ. ಕೋಲ್ಕತ್ತಾದಲ್ಲಿ ನಡೆಯುತ್ತಿರುವ ಸರಣಿಯ ಅಂತಿಮ ಪಂದ್ಯದಲ್ಲಿ ಟಾಸ್ ಗೆದ್ದ ಭಾರತ ಮೊದಲು ಬ್ಯಾಟಿಂಗ್ ಮಾಡಿ, ನ್ಯೂಜಿಲೆಂಡ್‌ಗೆ 185 ರನ್ ಗುರಿ ನೀಡಿದೆ. ಬಿರುಸಿನ ಬ್ಯಾಟಿಂಗ್ ನಡೆಸಿದ ರೋಹಿತ್ 31 ಎಸೆತಗಳಲ್ಲಿ 56 ರನ್ ಗಳಿಸಿ ನೆರವಾದರು. ಸರಣಿಯ ಮೊದಲೆರಡು ಪಂದ್ಯಗಳಲ್ಲಿ ರೋಹಿತ್ ಕ್ರಮವಾಗಿ 48 ರನ್ ಮತ್ತು 55 ರನ್ ಗಳಿಸಿದ್ದರು.
ಅತಿಹೆಚ್ಚು ಇನಿಂಗ್ಸ್‌ಗಳಲ್ಲಿ 50ಕ್ಕಿಂತ ಹೆಚ್ಚು ರನ್ ಗಳಿಸಿದ ದಾಖಲೆ, ಭಾರತ ಏಕದಿನ ಮತ್ತು ಟೆಸ್ಟ್ ತಂಡದ ನಾಯಕರಾಗಿರುವ ವಿರಾಟ್ ಕೊಹ್ಲಿ ಅವರ ಹೆಸರಿನಲ್ಲಿ ಇದುವರೆಗೆ ಇತ್ತು. 95 ಪಂದ್ಯಗಳ 87 ಇನಿಂಗ್ಸ್‌ಗಳಲ್ಲಿ ಕೊಹ್ಲಿ, 29 ಇನಿಂಗ್ಸ್‌ಗಳಲ್ಲಿ 50 ಹಾಗೂ ಅದಕ್ಕಿಂತ ಹೆಚ್ಚು ರನ್ ಗಳಿಸಿದ್ದರು. 119 ಪಂದ್ಯಗಳ 111 ಇನಿಂಗ್ಸ್‌ಗಳಲ್ಲಿ ರೋಹಿತ್ 30 ಬಾರಿ ಐವತ್ತಕ್ಕಿಂತ ಹೆಚ್ಚು ರನ್ ಕಲೆಹಾಕಿದ್ದಾರೆ. ಇದರಲ್ಲಿ 4 ಶತಕಗಳು ಸೇರಿವೆ.
ಉಳಿದಂತೆ ಪಾಕಿಸ್ತಾನದ ಬಾಬರ್ ಅಜಂ (25), ಆಸ್ಟ್ರೇಲಿಯಾದ ಡೇವಿಡ್ ವಾರ್ನರ್ (22) ಮತ್ತು ನ್ಯೂಜಿಲೆಂಡ್‌ನ ಮಾರ್ಟಿನ್ ಗುಪ್ಟಿಲ್ (21) ಕ್ರಮವಾಗಿ 3, 4 ಮತ್ತು 5ನೇ ಸ್ಥಾನಗಳಲ್ಲಿದ್ದಾರೆ.
PublicNext
22/11/2021 07:25 am