ದುಬೈ: ಡೇವಿಡ್ ವಾರ್ನರ್, ಮಿಚೆಲ್ ಮಾರ್ಷ್ ಅಬ್ಬರದ ಅರ್ಧಶತಕ, ಗ್ಲೆನ್ ಮ್ಯಾಕ್ಸ್‌ವೆಲ್ ಸಮಯೋಚಿತ ಬ್ಯಾಟಿಂಗ್ ಸಹಾಯದಿಂದ ಆಸ್ಟ್ರೇಲಿಯಾ ತಂಡವು ನ್ಯೂಜಿಲೆಂಡ್ ವಿರುದ್ಧ 8 ವಿಕೆಟ್‌ಗಳಿಂದ ಗೆಲ್ಲುವ ಮೂಲಕ ಚೊಚ್ಚಲ ಟಿ20 ವಿಶ್ವಕಪ್ ಟ್ರೋಫಿಗೆ ಮುತ್ತಿಟ್ಟಿದೆ.
ದುಬೈ ಅಂತರರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಟಿ20 ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಟಾಸ್ ಗೆದ್ದ ಆಸ್ಟ್ರೇಲಿಯಾ ತಂಡದ ನಾಯಕ ಆರನ್ ಫಿಂಚ್ ಫೀಲ್ಡಿಂಡ್ ಆಯ್ದುಕೊಂಡಿದ್ದರು. ಅದರಂತೆ ಮೊದಲು ಬ್ಯಾಟಿಂಗ್ ಮಾಡಿದ ಕಿವೀಸ್ ಪಡೆ 4 ವಿಕೆಟ್ ನಷ್ಟಕ್ಕೆ 172 ರನ್ ಗಳಿಸಿತ್ತು.
ಟಾರ್ಗೆಟ್ ಬೆನ್ನತ್ತಿದ ಆಸೀಸ್ ಪಡೆ 7 ಎಸೆತಗಳು ಬಾಕಿ ಇರುವಂತೆ 2 ವಿಕೆಟ್ ನಷ್ಟಕ್ಕೆ 173 ರನ್ ಚಚ್ಚಿ ಗೆಲುವು ಸಾಧಿಸಿದೆ. ತಂಡದ ಪರ ಡೇವಿಡ್ ವಾರ್ನರ್ 53 ರನ್, ಮಿಚೆಲ್ ಮಾರ್ಷ್ ಅಜೇಯ 77 ರನ್ ಹಾಗೂ ಗ್ಲೆನ್ ಮ್ಯಾಕ್ಸ್‌ವೆಲ್ 28 ರನ್ ಸಿಡಿಸಿದರು.
ಇದಕ್ಕೂ ಮುನ್ನ ನ್ಯೂಜಿಲೆಂಡ್ ಪರ ನಾಯಕ ಕೇನ್ ವಿಲಿಯಮ್ಸನ್ 85 ರನ್ (48 ಎಸೆತ, 10 ಬೌಂಡರಿ, 3 ಸಿಕ್ಸ್) ಸಿಡಿಸಿದ್ದರು. ಉಳಿದಂತೆ ಮಾರ್ಟಿನ್ ಗಪ್ಟಿಲ್ 28 ರನ್, ಗ್ಲೆನ್ ಫಿಲಿಪ್ಸ್ 18 ರನ್, ಡೇರಿಲ್ ಮಿಚೆಲ್ 11 ರನ್, ಜೇಮ್ಸ್ ನೀಶಮ್ ಅಜೇಯ 13 ರನ್ ಹಾಗೂ ಟಿಮ್ ಸೀಫರ್ಟ್ ಅಜೇಯ 8 ರನ್ ಗಳಿಸಿದ್ದರು.
ಇನ್ನು ಆಸ್ಟ್ರೇಲಿಯಾ ಪರ ಜೋಶ್ ಹ್ಯಾಜಲ್‌ವುಡ್ ಮಿಂಚಿನ ಬೌಲಿಂಗ್ ಪ್ರದರ್ಶನ ನೀಡಿದ್ದರು. ಅವರು 4 ಓವರ್ ಬೌಲಿಂಗ್ ಮಾಡಿ ಕೇವಲ 16 ರನ್ ನೀಡಿ ಪ್ರಮುಖ 3 ವಿಕೆಟ್ ಉರುಳಿಸಿದ್ದರು. ಆಡಮ್ ಜಂಪಾ ಕೂಡ 1 ವಿಕೆಟ್ ಪಡೆದು ತಂಡಕ್ಕೆ ಆಸರೆಯಾಗಿದ್ದರು.
PublicNext
14/11/2021 10:59 pm