ಇಸ್ಲಾಮಾಬಾದ್: ಪಾಕಿಸ್ತಾನ ಕ್ರಿಕೆಟರ್ ಹಸನ್ ಅಲಿ ಪತ್ನಿ ಶಾಮಿಯಾ ಆರ್ಜೂ ತನ್ನ ಕುಟುಂಬಕ್ಕೆ ಭದ್ರತೆ ನೀಡುವಂತೆ ಭಾರತ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮನವಿ ಮಾಡಿಕೊಂಡಿದ್ದಾರೆ.
ಹೌದು. ಟಿ20 ವಿಶ್ವಕಪ್ ಸೆಮಿಫೈನಲ್‍ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಸೋತ ಪಾಕಿಸ್ತಾನ ತಂಡವು ಟೂರ್ನಿಯಿಂದ ಹೊರಬಿದ್ದಿದೆ. ಸದ್ಯ ಪಾಕ್ ಆಟಗಾರರ ವಿರುದ್ಧ ಅಲ್ಲಿನ ಕ್ರಿಕೆಟ್ ಅಭಿಮಾನಿಗಳು ಫುಲ್ ಗರಂ ಆಗಿದ್ದಾರೆ. ಅದರಲ್ಲೂ ಸೆಮಿಫೈನಲ್ ಪಂದ್ಯದಲ್ಲಿ ಪ್ರಮುಖ ಕ್ಯಾಚ್ ಬಿಟ್ಟ ವೇಗಿ ಹಸನ್ ಅಲಿ ಪತ್ನಿ ಶಾಮಿಯಾ ಆರ್ಜೂ ಮತ್ತು ಮಗುವಿಗೆ ಕ್ರಿಕೆಟ್ ಅಭಿಮಾನಿಗಳು ಜೀವ ಬೆದರಿಕೆ ಹಾಕಿದ್ದಾರೆ. ಇದರಿಂದಾಗಿ ಶಾಮಿಯಾ ಆರ್ಜೂ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರ ಸಹಾಯ ಕೇಳಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಶಾಮಿಯಾ ಆರ್ಜೂ, "ನಾನು ಭಾರತದವಳು ಎನ್ನಲು ತುಂಬಾ ಹೆಮ್ಮೆ ಪಡುತ್ತೇನೆ. ನಾನು ಪಾಕಿಸ್ತಾನದವನನ್ನು ಮದುವೆ ಆಗಿದ್ದೇನೆ ಎಂದ ಮಾತ್ರಕ್ಕೆ ಭಾರತವನ್ನು ಇಷ್ಟಪಡದಿರಲು ಸಾಧ್ಯವಿಲ್ಲ. ಇದೀಗ ಇಲ್ಲಿನ ನೀಚ ಕ್ರೀಡಾ ಅಭಿಮಾನಿಗಳು ನನ್ನ ಸಣ್ಣ ಮಗುವನ್ನು ಬಿಡದೇ ಕುಟುಂಬಕ್ಕೆ ಬೆದರಿಕೆ ಹಾಕುತ್ತಿದ್ದಾರೆ. ಹಾಗಾಗಿ ನಾನು ಸುರಕ್ಷಿತವಾಗಿ ನನ್ನ ಮಗುವಿನೊಂದಿಗೆ ನನ್ನ ತವರೂರು ಹರಿಯಾಣಕ್ಕೆ ಬರಲು ಇಚ್ಛಿಸಿದ್ದೇನೆ ನನಗೆ ದಯವಿಟ್ಟು ಸಹಾಯ ಮಾಡಿ" ಎಂದು ಪ್ರಧಾನಿ ಮೋದಿ ಮತ್ತು ವಿದೇಶಾಂಗ ಸಚಿವ ಡಾ.ಎಸ್.ಜೈಶಂಕರ್ ಅವರಿಗೆ ಮನವಿ ಮಾಡಿಕೊಂಡಿದ್ದಾರೆ.
ಯಾರಿದು ಶಾಮಿಯಾ?:
ಶಾಮಿಯಾ ಮೂಲತಃ ಭಾರತದ ಹರಿಯಾಣದವರು. ಈ ಹಿಂದೆ ಕುಟುಂಬ ಸಮೇತರಾಗಿ ಹರಿಯಾಣದಲ್ಲಿ ನೆಲೆಸಿದ್ದರು. ಬಳಿಕ ದುಬೈನ ಎಮಿರೇಟ್ಸ್ ಏರ್‍ಲೈನ್ಸ್ ಎಂಜಿನಿಯರ್ ಆಗಿ ಕಾರ್ಯನಿರ್ವಹಿಸುತ್ತಿದ್ದರು. ಈ ವೇಳೆ ಪರಸ್ಪರ ಭೇಟಿಯಾದ ಹಸನ್ ಅಲಿ ಮತ್ತು ಶಾಮಿಯಾ ಸ್ನೇಹಿತರಾಗಿ ಬಳಿಕ 2019ರಲ್ಲಿ ವಿವಾಹವಾಗಿದ್ದರು.
PublicNext
13/11/2021 10:41 pm