ಮುಂಬೈ: ನವೆಂಬರ್ ಅಂತ್ಯದಿಂದ ಆರಂಭಗೊಳ್ಳಲಿರುವ ನ್ಯೂಜಿಲ್ಯಾಂಡ್ ವಿರುದ್ಧ ಟೆಸ್ಟ್ ಸರಣಿಗೆ ಭಾರತ ತಂಡವನ್ನು ಪ್ರಕಟಿಸಲಾಗಿದೆ. ಅಜಿಂಕ್ಯ ರಹಾನೆ ಸಾರಥ್ಯದಲ್ಲಿ ಮೊದಲ ಪಂದ್ಯ ಆರಂಭಗೊಳ್ಳಲಿದೆ. ಮೊದಲ ಪಂದ್ಯಕ್ಕೆ ವಿರಾಟ್ ಕೊಹ್ಲಿ ಗೈರಾಗುವ ಕಾರಣ, ಅಜಿಂಕ್ಯ ರಹಾನೆ ತಂಡವನ್ನು ಮುನ್ನಡೆಸಲಿದ್ದಾರೆ. ಎರಡನೇ ಪಂದ್ಯಕ್ಕೆ ವಿರಾಟ್ ಮರಳಲಿದ್ದಾರೆ.
ರೋಹಿತ್ ಶರ್ಮಾ, ರಿಷಭ್ ಪಂತ್, ಜಸ್ಪ್ರೀತ್ ಬಮ್ರಾಗೆ ವಿಶ್ರಾಂತಿ ನೀಡಲಾಗಿದೆ. ಮೊದಲ ಪಂದ್ಯಕ್ಕೆ ಪೂಜಾರ ಉಪ ನಾಯಕನಾಗಿರಲಿದ್ದಾರೆ. ತಂಡದಲ್ಲಿ ಮೂವರು ಕನ್ನಡಿಗರಿಗೆ ಸ್ಥಾನ ನೀಡಲಾಗಿದ್ದು, ಆರಂಭಿಕರಾದ ಕೆ.ಎಲ್.ರಾಹುಲ್, ಮಯಾಂಕ್ ಅಗರ್ವಾಲ್ ಮತ್ತು ಬೌಲರ್ ಪ್ರಸಿಧ್ ಕೃಷ್ಣ ಸ್ಥಾನ ಪಡೆದಿದ್ದಾರೆ.
ಪಂತ್ ಅನುಪಸ್ಥಿತಿಯಲ್ಲಿ ವೃದ್ಧಿಮಾನ್ ಸಾಹಾ ಅವರು ಪ್ರಮುಖ ವಿಕೆಟ್ ಕೀಪರ್ ಆಗಿರಲಿದ್ದು, ಕೆಎಸ್ ಭರತ್ ಅವರನ್ನು ಹೆಚ್ಚುವರಿ ಕೀಪರ್ ಆಗಿ ಆಯ್ಕೆ ಮಾಡಲಾಗಿದೆ. ಆಲ್ ರೌಂಡರ್ ಕೋಟಾದಲ್ಲಿ ಜಡೇಜಾ ಜೊತೆಗೆ ಅಕ್ಷರ್ ಪಟೇಲ್, ಜಯಂತ್ ಯಾದವ್ ಆಯ್ಕೆ ಮಾಡಲಾಗಿದೆ.
ಕಿವೀಸ್ ವಿರುದ್ಧ ಎರಡು ಪಂದ್ಯಗಳು ನಡೆಯಲಿದ್ದು, ಮೊದಲ ಪಂದ್ಯ ಕಾನ್ಪುರದಲ್ಲಿ ನಡೆಯಲಿದ್ದು ನ.25ರಂದು ಆರಂಭವಾಗಲಿದೆ. ಎರಡನೇ ಪಂದ್ಯ ಡಿ 3ರಿಂದ ಮುಂಬೈನಲ್ಲಿ ನಡೆಯಲಿದೆ.
ತಂಡ: ಅಜಿಂಕ್ಯ ರಹಾನೆ (ನಾಯಕ), ಚೇತೇಶ್ವರ ಪೂಜಾರ (ಉಪ ನಾಯಕ), ಕೆಎಲ್ ರಾಹುಲ್, ಮಯಾಂಕ್ ಅಗರ್ವಾಲ್, ಶುಭ್ಮನ್ ಗಿಲ್, ಶ್ರೇಯಸ್ ಅಯ್ಯರ್, ವೃದ್ಧಿಮಾನ್ ಸಾಹಾ (ವಿ.ಕೀ), ಕೆಎಸ್ ಭರತ್ (ವಿ.ಕೀ), ರವೀಂದ್ರ ಜಡೇಜಾ, ಆರ್. ಅಶ್ವಿನ್, ಅಕ್ಷರ್ ಪಟೇಲ್, ಜಯಂತ್ ಯಾದವ್, ಇಶಾಂತ್ ಶರ್ಮಾ, ಉಮೇಶ್ ಯಾದವ್, ಮೊಹಮ್ಮದ್ ಸಿರಾಜ್, ಪ್ರಸಿಧ್ ಕೃಷ್ಣ.
PublicNext
12/11/2021 01:11 pm