ಶಾರ್ಜಾ: ಬಾಬರ್ ಆಜಮ್, ಶೋಯೆಬ್ ಮಲೀಕ್ ಅಬ್ಬರದ ಅರ್ಧಶತಕ ಹಾಗೂ ಉತ್ತಮ ಬೌಲಿಂಗ್ ಪ್ರದರ್ಶನದಿಂದ ಪಾಕಿಸ್ತಾನ ತಂಡವು ಸ್ಕಾಟ್ಲೆಂಡ್ ವಿರುದ್ಧ 72 ರನ್‌ಗಳಿಂದ ಭರ್ಜರಿ ಗೆಲುವು ಸಾಧಿಸಿದೆ.
ಟಿ20 ವಿಶ್ವಕಪ್ ಟೂರ್ನಿಯ ಭಾಗವಾಗಿ ಶಾರ್ಜಾ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಪಾಕಿಸ್ತಾನದ ತಂಡದ ನಾಯಕ ಬಾಬರ್ ಆಜಮ್ ಬ್ಯಾಟಿಂಗ್ ಆಯ್ದುಕೊಂಡಿದ್ದರು. ಅದರಂತೆ ಮೊದಲು ಬ್ಯಾಟಿಂಗ್ ಮಾಡಿದ ಪಾಕ್ ತಂಡವು 4 ವಿಕೆಟ್ ನಷ್ಟಕ್ಕೆ 189 ರನ್ ಗಳಿಸಿತ್ತು. ಬಳಿಕ ಬ್ಯಾಟಿಂಗ್ ಮಾಡಿದ ಸ್ಕಾಟ್ಲೆಂಡ್ ತಂಡವು 6 ವಿಕೆಟ್ ನಷ್ಟಕ್ಕೆ 117 ರನ್‌ಗಳನ್ನು ಮಾತ್ರ ಗಳಿಸಲು ಶಕ್ತವಾಯಿತು.
ಸ್ಕಾಟ್ಲೆಂಡ್ ಪರ ರಿಚಿ ಬೆರಿಂಗ್ಟನ್ ಏಕಾಂಗಿ ಹೋರಾಟ ನಡೆಸಿ ಸೋಲಿನ ಅಂತರ ತಗ್ಗಿಸಿದರು. ಅವರು 54 ರನ್ (37 ಎಸೆತ, 4 ಬೌಂಡರಿ, 1 ಸಿಕ್ಸರ್) ಸಿಡಿಸಿದರು. ಇನ್ನುಳಿದ ಆಟಗಾರರು ಬ್ಯಾಟಿಂಗ್ ವೈಫಲ್ಯ ತೋರಿದರು. ಇನ್ನು ಪಾಕ್ ಪರ ಶಾದಾಬ್ ಖಾನ್ 2 ವಿಕೆಟ್ ಪಡೆದರೆ, ಶಾಹೀನ್ ಶಾ ಆಫ್ರಿದಿ, ಹ್ಯಾರಿಸ್ ರೌಫ್ ಹಾಗೂ ಹಸನ್ ಅಲಿ ತಲಾ ಒಂದು ವಿಕೆಟ್ ಕಿತ್ತರು.
ಇದಕ್ಕೂ ಮುನ್ನ ಪಾಕಿಸ್ತಾನದ ಪರ ಬಾಬರ್ ಆಜಮ್ 66 ರನ್, ಶೋಯೆಬ್ ಮಲೀಕ್ ಅಜೇಯ 54 ರನ್ ಹಾಗೂ ಮೊಹಮ್ಮದ್ ಹಫೀಸ್ 31 ರನ್ ಗಳಿಸಿದ್ದರು.
PublicNext
07/11/2021 11:04 pm