ದುಬೈ: ಕನ್ನಡಿಗ ಕೆ.ಎಲ್. ರಾಹುಲ್ ಸ್ಫೋಟಕ ಅರ್ಧಶತಕ ಹಾಗೂ ರವೀಂದ್ರ ಜಡೇಜಾ, ಮೊಹಮ್ಮದ್ ಶಮಿ, ಜಸ್‌ಪ್ರೀತ್ ಬುಮ್ರಾ ಅದ್ಭುತ ಬೌಲಿಂಗ್ ಪ್ರದರ್ಶನದಿಂದ ಭಾರತ ತಂಡವು ಸ್ಕಾಟ್ಲೆಂಡ್ ವಿರುದ್ಧ 8 ವಿಕೆಟ್‌ಗಳಿಂದ ಗೆದ್ದು ಬೀಗಿದೆ.
ಟಿ20 ವಿಶ್ವಕಪ್ ಟೂರ್ನಿಯ ಭಾಗವಾಗಿ ದುಬೈ ಅಂತರರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಬೌಲಿಂಗ್ ಆಯ್ದುಕೊಂಡಿದ್ದರು. ಅದರಂತೆ ಮೊದಲು ಬ್ಯಾಟಿಂಗ್ ಮಾಡಿದ ಸ್ಕಾಟ್ಲೆಂಡ್ 17.4 ಓವರ್‌ಗಳಲ್ಲಿ ತನ್ನ ಎಲ್ಲ 10 ವಿಕೆಟ್ ಕಳೆದುಕೊಂಡು 85 ರನ್ ಗಳಿಸಲು ಶಕ್ತವಾಗಿತ್ತು.
86 ರನ್‌ಗಳ ಸಾಧಾರಣ ಮೊತ್ತದ ಗುರಿ ಬೆನ್ನತ್ತಿದ ಭಾರತ 6.3 ಓವರ್‌ಗಳಲ್ಲಿ 2 ವಿಕೆಟ್ ನಷ್ಟಕ್ಕೆ 89 ರನ್ ಚೆಚ್ಚಿ ಗೆದ್ದು ಬೀಗಿದೆ. ಟೀಂ ಇಂಡಿಯಾ ಪರ ಕೆ.ಎಲ್.ರಾಹುಲ್ 50 ರನ್ (19 ಎಸೆತ, 6 ಬೌಂಡರಿ, 3 ಸಿಕ್ಸ್) ಹಾಗೂ ರೋಹಿತ್ ಶರ್ಮಾ 30 ರನ್ (16 ಎಸೆತ, 5 ಬೌಂಡರಿ, 1 ಸಿಕ್ಸರ್) ಸಿಡಿಸಿದರು.
ಇದಕ್ಕೂ ಮುನ್ನ ಬ್ಯಾಟಿಂಗ್ ಮಾಡಿದ್ದ ಸ್ಕಾಟ್ಲೆಂಡ್ ಪರ ಜಾರ್ಜ್ ಮುನ್ಸೆ 24 ರನ್, ಮೈಕೆಲ್ ಲೀಸ್ಕ್ 21 ರನ್ ಗಳಿಸಿದ್ದರು. ಉಳಿದ ಎಲ್ಲ ಆಟಗಾರರು 20 ರನ್‌ಗಳ ಗಡಿ ದಾಟಲು ವಿಫಲರಾಗಿದ್ದದರು. ಇನ್ನು ಟೀಂ ಇಂಡಿಯಾ ಪರ ರವೀಂದ್ರ ಜಡೇಜಾ ಹಾಗೂ ಮೊಹಮ್ಮದ್ ಶಮಿ ತಲಾ 3 ವಿಕೆಟ್ ಪಡೆದು ಮಿಂಚಿದ್ದರೆ, ಜಸ್‌ಪ್ರೀತ್ ಬುಮ್ರಾ 2 ವಿಕೆಟ್ ಹಾಗೂ ಆರ್. ಅಶ್ವಿನ್ 1 ವಿಕೆಟ್ ಉರುಳಿಸಿದ್ದರು.
PublicNext
05/11/2021 10:01 pm