ಅಬುಧಾಬಿ: ರೋಹಿತ್ ಶರ್ಮಾ, ಕೆ.ಎಲ್.ರಾಹುಲ್ ಶತಕದ ಜೊತೆಯಾಟ, ಕೊನೆಯಲ್ಲಿ ರಿಷಭ್ ಪಂತ್ ಹಾಗೂ ಹಾರ್ದಿಕ್ ಪಾಂಡ್ಯ ಅಬ್ಬರ ಬ್ಯಾಟಿಂಗ್ ಸಹಾಯದಿಂದ ಟೀಂ ಇಂಡಿಯಾ ಅಫ್ಘಾನಿಸ್ತಾನ ತಂಡಕ್ಕೆ 211 ರನ್‌ಗಳ ಬೃಹತ್ ಮೊತ್ತದ ಗುರಿ ನೀಡಿದೆ.
ಅಬುಧಾಬಿ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಟಿ20 ವಿಶ್ವಕಪ್ ಟೂರ್ನಿಯ 33ನೇ ಪಂದ್ಯದಲ್ಲಿ ಟಾಸ್ ಗೆದ್ದ ಅಫ್ಘಾನ್ ನಾಯಕ ಮೊಹಮ್ಮದ್ ನಬಿ ಬೌಲಿಂಗ್ ಆಯ್ದುಕೊಂಡರು. ಅದರಂತೆ ಮೊದಲು ಬ್ಯಾಟಿಂಗ್ ಮಾಡಿದ ಭಾರತ 2 ವಿಕೆಟ್ ನಷ್ಟಕ್ಕೆ 210 ರನ್‌ಗಳನ್ನು ಸಿಡಿಸಿದೆ.
ಟೀಂ ಇಂಡಿಯಾ ಆರಂಭಿಕ ಬ್ಯಾಟರ್ ಗಳಾದ ಕೆ.ಎಲ್. ರಾಹುಲ್ ಹಾಗೂ ರೋಹಿತ್ ಶರ್ಮಾ ಅದ್ಭುತ ಬ್ಯಾಟಿಂಗ್ ಪ್ರದರ್ಶನ ನೀಡಿದರು. ಈ ಜೋಡಿಯು ಮೊದಲ ವಿಕೆಟ್ 140 ರನ್ ದಾಖಲಿಸಿತು. ಸ್ಫೋಟಕ ಬ್ಯಾಟಿಂಗ್ ಮಾಡಿದ ರೋಹಿತ್ ಶರ್ಮಾ 47 ಎಸೆತಗಳಲ್ಲಿ 74 ರನ್ (8 ಬೌಂಡರಿ, 3 ಸಿಕ್ಸ್) ಸಿಡಿಸಿದರು.
ಇನ್ನು ಎರಡನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಬೇಕಿದ್ದ ನಾಯಕ ವಿರಾಟ್ ಕೊಹ್ಲಿ ರಿಷಭ್ ಪಂತ್ ಗೆ ಅವಕಾಶ ಮಾಡಿಕೊಟ್ಟರು. ಆದರೆ ಉತ್ತಮ ಫಾರ್ಮ್ ನಲ್ಲಿದ್ದ ಕೆ.ಎಲ್. ರಾಹುಲ್ 69 ರನ್ (48 ಎಸೆತ, 6 ಬೌಂಡರಿ, 2 ಸಿಕ್ಸ್) ಸಿಡಿಸಿ ವಿಕೆಟ್ ಒಪ್ಪಿಸಿದರು. ಈಗಲೂ ವಿರಾಟ್ ಮೈದಾನಕ್ಕೆ ಇಳಿಯದೇ ಹಾರ್ದಿಕ್ ಪಾಂಡ್ಯ ಅವರಿಗೆ ಬ್ಯಾಟಿಂಗ್ ಅವಕಾಶ ಕಲ್ಪಿಸಿದರು.
ಇದರೊಂದಿಗೆ ಉತ್ತಮ ಅವಕಾಶ ಪಡೆದುಕೊಂಡ ರಿಷಭ್ ಪಂತ್13 ಎಸೆತಗಳಲ್ಲಿ ಅಜೇಯ 27 ರನ್ ಹಾಗೂ ಹಾರ್ದಿಕ್ ಪಾಂಡ್ಯ 13 ಎಸೆತಗಳಲ್ಲಿ ಅಜೇಯ 35 ರನ್ ಚಚ್ಚಿದರು.
PublicNext
03/11/2021 09:23 pm